ದಮ್ಮಾಮ್: ಐ.ಎಸ್.ಎಫ್ ನ್ಯಾಯಾಂಗ ಹೋರಾಟಕ್ಕೆ ಮಣಿದು ಅನಿವಾಸಿಗೆ ವೇತನ ನೀಡಿದ ಪ್ರಾಯೋಜಕ

Prasthutha|

ದಮ್ಮಾಮ್: ಕಾರ್ಮಿಕರೊಬ್ಬರಿಗೆ ವೇತನ ನೀಡದೆ ಸತಾಯಿಸುತ್ತಿದ್ದ ಪ್ರಾಯೋಜಕರೊಬ್ಬನನ್ನು ಜೈಲಿಗೆ ಕಳುಹಿಸಿ ಸಂತ್ರಸ್ತನಿಗೆ ನ್ಯಾಯ ಒದಗಿಸುವಲ್ಲಿ ಇಂಡಿಯನ್ ಸೋಶಿಯಲ್ ಫೋರಂ ಯಶಸ್ವಿಯಾಗಿದೆ. ಪ್ರಕರಣದಲ್ಲಿ ಸೌದಿ ನ್ಯಾಯಾಲಯವೊಂದು ಪ್ರಾಯೋಜಕನ ಬಂಧನಕ್ಕೆ ಆದೇಶ ಹೊರಡಿಸಿದ್ದು ನಂತರ ಎಲ್ಲಾ ಬಾಕಿ ವೇತನಗಳನ್ನು ನೀಡುವಂತೆ ಸೂಚಿಸಿದೆ.

- Advertisement -


ದಮ್ಮಾಮ್ ನ ನುಮಾ ಅಲ್ ಹಸಾ ಟ್ರೇಡಿಂಗ್ ಕಂಪೆನಿಯಲ್ಲಿ ದರ್ಜಿ ವೃತ್ತಿ ಮಾಡುತ್ತಿದ್ದ ಉತ್ತರ ಪ್ರದೇಶದ ಲಕ್ನೊದ ಬರಲಹ ಪೂರ್ವ ಗ್ರಾಮದ ನೂರ್ ಮುಹಮ್ಮದ್ ಎಂಬವರಿಗೆ ಕಳೆದ ನಾಲ್ಕು ತಿಂಗಳುಗಳಿಂದ ಪ್ರಾಯೋಜಕನು ವೇತನ ನೀಡದೆ ಸತಾಯಿಸುತ್ತಿದ್ದ. ಕಂಗಾಲಾಗಿದ್ದ ನೂರ್ ಮುಹಮ್ಮದ್ ರಿಗೆ ಮಂಗಳೂರಿನ ನಝೀರ್ ಜಿಪಿ ಎಂಬವರು ಐ.ಎಸ್.ಎಫ್ ಗೆ ಕೃತಜ್ನತೆ ಸಲ್ಲಿಸಿ ಹಾಕಿದ ಪೋಸ್ಟೊಂದು ನೆರವಿಗೆ ಬಂದಿದೆ. ಮಂಗಳೂರಿನ ಗುರುಪುರ ಎಂಬಲ್ಲಿನ ನಝೀರ್ ಎಂಬ ವ್ಯಕ್ತಿ 27 ವರ್ಷಗಳ ಬಳಿಕ ತನಗೆ ಸೌದಿ ಅರೇಬಿಯಾದಿಂದ ತವರಿಗೆ ಮರಳಲು ನೆರವಾದ ಇಂಡಿಯನ್ ಸೋಶಿಯಲ್ ಫೋರಂಗೆ ಅಭಿನಂದನೆ ಸಲ್ಲಿಸಿ ಫೇಸ್ ಬುಕ್ ಪೋಸ್ಟ್ ಹಾಕಿದ್ದರು. ಇದನ್ನು ಓದಿದ ನೂರ್ ಮುಹಮ್ಮದ್ ರವರು ನಝೀರ್ ರವರ ಮೂಲಕ ಐ.ಎಸ್.ಎಫ್ ಸದಸ್ಯರ ದೂರವಾಣಿ ಸಂಖ್ಯೆ ಪಡೆದು ಸಂಘಟನೆಯೊಂದಿಗೆ ನೆರವು ಕೋರಿದ್ದರು. ನಂತರ ಐ.ಎಸ್.ಎಫ್ ಅಲ್ ಖೋಬಾರ್ ಘಟಕದ ಸಿಡಬ್ಲ್ಯುಡಿ ವಿಭಾಗದ ಮುಖ್ಯಸ್ಥ ಇಬ್ರಾಹೀಂ ಕೃಷ್ಣಾಪುರ, ರಿಝ್ವಾನ್ ಸಸ್ತಾನ್, ಇದ್ರೀಸ್ ಗಂಗೊಳಿರವರ ತಂಡವು ಪ್ರಕರಣವನ್ನು ಕಾರ್ಮಿಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಲು ನೂರ್ ಮುಹಮ್ಮದ್ ರನ್ನು ನೆರವಾಗಿತ್ತು.


ಪ್ರಕರಣವನ್ನು ಪರಿಶೀಲಿಸಿದ ದಮ್ಮಾಮ್ ನ ಕಾರ್ಮಿಕ ನ್ಯಾಯಾಲಯವು ಪ್ರಾಯೋಜಕನಿಗೆ ನೋಟಿಸ್ ಜಾರಿ ಮಾಡಿತ್ತು. ಪ್ರಾಯೋಜಕನು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಕಾರ್ಮಿಕ ನ್ಯಾಯಾಲಯವು ಪ್ರಕರಣವನ್ನು ‘ಮಹಕಮತುಲ್ ತಂಫೀದ್’ (Execution Court)ಗೆ ಹಸ್ತಾಂತರಿಸಿತು. ಅಲ್ಲಿಯೂ ಪ್ರಾಯೋಜಕನು ಹಾಜರಾಗಿರಲಿಲ್ಲ. ನ್ಯಾಯಾಲಯ ಪ್ರಕರಣವನ್ನು ದಮ್ಮಾಮ್ ನ ಹುಕೂಕುಲ್ ಮದನಿ (ನಾಗರಿಕ ಹಕ್ಕು ) ಪೊಲೀಸ್ ಠಾಣೆಗೆ ಹಸ್ತಾಂತರಿಸಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಾಯೋಜಕನನ್ನು ಬಂಧಿಸಿದ್ದರು.

- Advertisement -

ನಿಗದಿತ ದಿನಗಳೊಳಗಾಗಿ ವೇತನವನ್ನು ನ್ಯಾಯಾಲಯಕ್ಕೆ ಒಪ್ಪಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರಾಯೋಜಕನನ್ನು ಬಿಡುಗಡೆಗೊಳಿಸಲಾಗಿತ್ತು. ಅದರಂತೆ ಪ್ರಾಯೋಜಕನು ಕೆಲವೇ ದಿನದಲ್ಲಿ ಬಾಕಿ ವೇತನವನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದನು.
ಕಳೆದ ಮೂರೂವರೆ ವರ್ಷಗಳಿಂದ ನೂರ್ ಮುಹಮ್ಮದ್ ಇಕಾಮ ವನ್ನು ಪ್ರಾಯೋಜಕನು ನವೀಕರಿಸಿರಲಿಲ್ಲ. ಇಕಾಮ ಅವಧಿ ಮುಗಿದಿರುವುದರಿಂದ ಅವರ ಖಾತೆಗೆ ಹಣ ಜಮಾವಣೆ ಮಾಡುವುದು ಸಾಧ್ಯವಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಐಎಸ್.ಎಫ್ ಸದಸ್ಯ ಇಬ್ರಾಹೀಂ ಕೃಷ್ಣಾಪುರರವರ ಹೆಸರಿಗೆ ಚೆಕ್ ನೀಡಿದ್ದು ನಂತರ ಆ ಹಣವನ್ನು ನೂರ್ ಮುಹಮ್ಮದ್ ರಿಗೆ ಹಸ್ತಾಂತರಿಸಲಾಯಿತು.


ನಂತರ ನೂರ್ ಮುಹಮ್ಮದ್ ರನ್ನು ತವರಿಗೆ ಕಳುಹಿಸುವುದಕ್ಕಾಗಿ ಕೆಲಸ ಆರಂಭಿಸಿದ ಐ.ಎಸ್.ಎಫ್ ಮತ್ತೆ ಕಾರ್ಮಿಕ ನ್ಯಾಯಾಲಯವನ್ನು ಸಂಪರ್ಕಿಸಿ ಎಕ್ಸಿಟ್ ಗೆ ಅನುಮೋದನೆ ಪಡೆಯಿತು. ಕಾರ್ಮಿಕ ನ್ಯಾಯಾಲವು ನಿರ್ಗಮನ ಕೇಂದ್ರಕ್ಕೆ ಈ ಕುರಿತು ಸೂಚನೆ ಒದಗಿಸಿತು. ಆದರೆ ನೂರ್ ಮುಹಮ್ಮದ್ ರ ಪಾಸ್ ಪೋರ್ಟ್ ಕಳೆದು ಹೋಗಿತ್ತು. ಈ ಹಿನ್ನೆಲೆಯಲ್ಲಿ ಐ.ಎಸ್.ಎಫ್ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ, ತುರ್ತು ನಿರ್ಗಮನಕ್ಕೆ ಬೇಕಾದ ಶ್ವೇತ ಪಾಸ್ ಪೋರ್ಟ್ ಪಡೆಯಲು ಯಶಸ್ವಿಯಾಯಿತು. ಅಂತಿಮವಾಗಿ ಜುಲೈ 3 ರಂದು ನೂರ್ ಮುಹಮ್ಮದ್ ತವರಿಗೆ ತಲುಪಿದ್ದಾರೆ.



Join Whatsapp