ಕೊಚ್ಚಿ: ಲಕ್ಷದ್ವೀಪದಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಪ್ರಜಾಪ್ರಭುತ್ವ ವಿರೋಧಿ ನೀತಿಗಳ ವಿರುದ್ಧ ತೀವ್ರವಾಗಿ ಪ್ರತಿಭಟಿಸಲು ವಿವಿಧ ರಾಜಕೀಯ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಒಳಗೊಂಡ ಜಂಟಿ ಸಮಿತಿಯನ್ನು ರಚಿಸಲಾಗಿದೆ. ಲಕ್ಷದ್ವೀಪ ಐಕ್ಯಮತ್ಯ ಸಮಿತಿಯ ಮೊದಲ ಸಭೆ ಕೇರಳದ ಕೊಚ್ಚಿಯಲ್ಲಿ ನಡೆಯಿತು.
ಆಯಿಷಾ ಸುಲ್ತಾನಾ ವಿರುದ್ಧದ ಸುಳ್ಳು ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕು ಮತ್ತು ಲಕ್ಷದ್ವೀಪವನ್ನು ಕಾರ್ಪೊರೇಟ್‌ಗಳಿಗೆ ಅಧೀನಗೊಳಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಹಿಂಪಡೆಯಬೇಕು ಎಂದು ಸಭೆ ಒತ್ತಾಯಿಸಿತು. ಲಕ್ಷದ್ವೀಪದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಮಾಡಲು ಪ್ರಯತ್ನಿಸುತ್ತಿರುವ ಆಡಳಿತಾಧಿಕಾರಿ ಪ್ರಫುಲ್ ಕೋಡಾ ಪಟೇಲ್ ಅವರ ಘೋರ ಕ್ರಮಗಳನ್ನು ಸಭೆ ಖಂಡಿಸಿದೆ.
ಸಮಿತಿಯ ಜನರಲ್ ಕನ್ವೀನರ್ ಸಂಸದ ಎಳಮರಂ ಕರೀಮ್ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಕ್ಷದ್ವೀಪದ ಜನರಿಗೆ ಸಮಿತಿಯ ವತಿಯಿಂದ ಅಗತ್ಯ ಕಾನೂನು ನೆರವು ನೀಡಲಾಗುವುದು. ಸಹಕರಿಸಲು ಆಸಕ್ತಿ ಹೊಂದಿರುವ ಇತರ ಸ್ವಯಂಸೇವಾ ಸಂಘಟನೆಗಳನ್ನು ಸೇರಿಸಿ ಸಮಿತಿಯನ್ನು ವಿಸ್ತರಿಸಲಾಗುವುದು ಎಂದರು.
ಲಕ್ಷದ್ವೀಪದ ಪರಿಸ್ಥಿತಿಯನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಕ್ಕಾಗಿ ಸುಳ್ಳು ಪ್ರಕರಣದಲ್ಲಿ ಸಿಲುಕಿರುವ ಆಯಿಷಾ ಸುಲ್ತಾನಾಗೆ ಸಮಿತಿಯು ಸಂಪೂರ್ಣ ಬೆಂಬಲ ನೀಡಲಿದೆ. ದ್ವೀಪವಾಸಿಗಳ ಜೀವನ ಹಕ್ಕನ್ನು ರಕ್ಷಿಸಲು ಧ್ವನಿ ಎತ್ತಲು ಕೇರಳದ ಜನತೆಯನ್ನು ಸಜ್ಜುಗೊಳಿಸಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.