ಸುಳ್ಯ | ಬಾಲ್ಯ ವಿವಾಹ ತಡೆದ ಸಿಡಿಪಿಒ ಅಧಿಕಾರಿಗಳು

Prasthutha|

ಸುಳ್ಯ: ತಾಲೂಕಿನ ದುಗಲಡ್ಕ ಕಂದಡ್ಕ ಮನೆಯೊಂದಕ್ಕೆ ಜು.14 ರಂದು ಸಿ.ಡಿ.ಪಿ.ಒ. ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಬಾಲ್ಯ ವಿವಾಹವನ್ನು ತಡೆದಿದ್ದಾರೆ.

- Advertisement -


ಸುಳ್ಯದ ಕಂದಡ್ಕದ ತಮಿಳು ಕುಟುಂಬವೊಂದರ ಪ್ರತಾಪ ಎಂಬ 26 ವರ್ಷದ ಯುವಕನಿಗೆ ಜು.15 ರಂದು ಮೈಸೂರಿನ ಹುಡುಗಿಯೊಂದಿಗೆ ಮದುವೆ ನಡೆಯುವುದಿತ್ತು. ಆದರೆ ಈ ಹುಡುಗಿಗೆ 18 ವರ್ಷ ತುಂಬಿರಲಿಲ್ಲ. ಈ ಬಗ್ಗೆ ಜು.14 ರಂದು ಸಂಜೆ ಸುಳ್ಯ ಸಿ.ಡಿ.ಪಿ.ಒ ಅವರಿಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿ.ಡಿ.ಪಿ.ಒ ರಶ್ಮಿ ಅಶೋಕ್ ಅವರು ಇಲಾಖೆಯ ಮೇಲ್ವಿಚಾರಕಿ ಹಾಗು ಸಹಾಯಕ ಮಕ್ಕಳ ಸಂರಕ್ಷಣಾಧಿಕಾರಿ ದೀಪಿಕಾ, ಗ್ರಾಮಕರಣಿಕ ತಿಪ್ಪೇಶ್, ನಾಲ್ಕು ಮಂದಿ ಪೊಲೀಸರ ಜತೆಗೆ ಕಂದಡ್ಕ ಎಂಬ ವಿವಾಹ ನಡೆಯುತ್ತಿರುವ ಸ್ಥಳಕ್ಕೆ ತೆರಳಿದ್ದಾರೆ.


ಆಗಲೇ ಮದುವೆಗೆ ಹುಡುಗಿ ಕಡೆಯವರು ಮೈಸೂರಿನಿಂದ ಆಗಮಿಸಿದ್ದರು. ವಧುವಿನ ಮನೆಯವರೊಡನೆ ವಿಚಾರಿಸಿದಾಗ ಹುಡುಗಿಗೆ 18 ವರ್ಷ ತುಂಬಿರುವ ಬಗ್ಗೆ ದಾಖಲೆ ಸಲ್ಲಿಸಲು ಅವರಿಗೆ ಸಾಧ್ಯವಾಗಲಿಲ್ಲವೆಂದು ಗೊತ್ತಾಗಿದೆ. ಬಳಿಕ ಅಧಿಕಾರಿಗಳು ಬಾಲ್ಯ ವಿವಾಹದ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ. 18 ವರ್ಷ ತುಂಬಿದ ಬಳಿಕ ಮದುವೆ ಮಾಡಿಸುವುದಾಗಿ ಹೇಳಿ ಯುವತಿಯ ಮನೆಯವರು ಮೈಸೂರಿಗೆ ಹಿಂತಿರುಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.



Join Whatsapp