ದೇಶದ್ರೋಹ ಕಾಯ್ದೆಯನ್ನು ಪ್ರಶ್ನಿಸುವ ಹೊಸ ಮನವಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಒಲವು

Prasthutha|

ನವದೆಹಲಿ: ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಮಾಜಿ ಸೇನಾಧಿಕಾರಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ಸ್ವೀಕರಿಸಿದೆ. ದೇಶದ್ರೋಹದಂತಹ ಗಂಭೀರ ಪ್ರಕರಣದಲ್ಲಿ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳಿಗೆ ಚ್ಯುತಿವೆಸಗಲಾಗುತ್ತದೆಯೆಂದು ಮಾಜಿ ಸೇನಾಧಿಕಾರಿ ಸುಪ್ರೀಮ್ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

- Advertisement -

ದೇಶದ್ರೋಹದ ಅಪರಾಧಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124-ಎ ಸಂಪೂರ್ಣವಾಗಿ ಅಸಾಂವಿಧಾನಿಕವಾಗಿರುವುದರಿಂದ ಐಪಿಸಿ 124-ಎ ಕಾಯ್ದೆಯನ್ನು ತೊಡೆದುಹಾಕಬೇಕೆಂದು ನಿವೃತ್ತ ಮೇಜರ್ ಜನರಲ್ ಎಸ್.ಜಿ ವೊಂಬಟ್ಕೆರೆ ಅವರು ಅರ್ಜಿಯಲ್ಲಿ ಮನವಿ ಮಾಡಿದ್ದರು. ಇವರ ಈ ಅರ್ಜಿಯ ಪ್ರತಿಯೊಂದನ್ನು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರಿಗೆ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ಎ.ಎಸ್. ಬೋಪಣ್ಣ ಹಾಗೂ ಹೃಷಿಕೇಶ್ ರಾಯ್ ರವರು ಅರ್ಜಿದಾರ ನಿವೃತ್ತ ಮೇಜರ್ ಎಸ್.ಜಿ. ವೊಂಬಟ್ಕೆರೆ ಯವರಿಗೆ ಸೂಚಿಸಿದರು. ವಸಾಹತುಶಾಹಿ ಪರಂಪರೆಯ ಅವಶೇಷವಾದ ಸೆಕ್ಷನ್ 124 ಎ (ದೇಶದ್ರೋಹ) ವನ್ನು ಎತ್ತಿಹಿಡಿದ ಕೇದಾರ್ ನಾಥ್ ಪ್ರಕರಣದ 1962 ರ ತೀರ್ಪು, ವ್ಯಕ್ತಿಯ ವಾಕ್ ಸ್ವಾತಂತ್ರ್ಯದ ಮೇಲಿನ ಹೆಚ್ಚಿನ ತಿಳುವಳಿಕೆ ಇರದಂತಹ ಸಮಯದಲ್ಲಿ ನೀಡಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ದೇಶದ್ರೋಹ ಕಾಯ್ದೆಯು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳ ಮೇಲಿನ ನಿರ್ಬಂಧವಾಗಿರುವುದರಿಂದ ಆರ್ಟಿಕಲ್ 19 (1) ಎ ಅಡಿಯಲ್ಲಿ ಚರ್ಚೆ ನಡೆಸಬೇಕೆಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿಂದೆಯೂ ಕೂಡ ಪತ್ರಕರ್ತರಾದ ಮಣಿಪುರದ ಕಿಶೋರ್ ಚಂದ್ರ ವಾಂಗ್ಚೆಮ್ಚಾ ಮತ್ತು ಚತ್ತೀಸ್ ಘಡದ ಕನಯ್ಯ ಲಾಲ್ ಶುಕ್ಲಾ ರವರು ಕೂಡ ದೇಶದ್ರೋಹ ಕಾಯ್ದೆಯ ಕುರಿತು ಅರ್ಜಿ ಸಲ್ಲಿಸಿದ್ದರು. ಮಾತ್ರವಲ್ಲದೇ ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಮೇಲ್ಮನವಿಯ ಹಿನ್ನೆಲೆಯಲ್ಲಿ ಪ್ರತ್ಯೇಕ ನ್ಯಾಯಪೀಠವು ಕೇಂದ್ರದಿಂದ ಪ್ರತಿಕ್ರಿಯೆ ಕೋರಿತ್ತು.



Join Whatsapp