ವಿಷಾಹಾರ ಸೇವನೆ: ಒಂದೇ ಕುಟುಂಬದ ನಾಲ್ವರು ಮೃತ್ಯು

Prasthutha|

ಚಿತ್ರದುರ್ಗ: ವಿಷ ಆಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಇಸಾಮುದ್ರ ಲಂಬಾಣಿಹಟ್ಟಿ ಗ್ರಾಮದಲ್ಲಿ ನಡೆದಿದೆ.

- Advertisement -

ಮನೆಯ ಯಜಮಾನ ತಿಪ್ಪನಾಯ್ಕ (45), ಪತ್ನಿ ಸುಧಾಬಾಯಿ (40) ತಾಯಿ ಗುಂಡಿಬಾಯಿ (80) ಪುತ್ರಿ ರಮ್ಯಾ(16) ಮೃತಪಟ್ಟಿದ್ದಾರೆ. ಪುತ್ರ ರಾಹುಲ್ ಸ್ಥಿತಿ ಗಂಭೀರವಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯತ್ತಿದ್ದಾನೆ.

ಸೋಮವಾರ ರಾತ್ರಿ ಕುಟುಂಬದ ಸದಸ್ಯರೆಲ್ಲರೂ ಊಟ ಮಾಡಿ ಮಲಗಿದ ಬಳಿಕ ಸುಮಾರು 11:30ಕ್ಕೆ ವಾಂತಿ ಮಾಡಿಕೊಂಡಿದ್ದಾರೆ. ನೆರೆಹೊರೆಯವರು ತಕ್ಷಣ ಇವರನ್ನು ಭರಮಸಾಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗ ಮಧ್ಯದಲ್ಲಿ ಗುಂಡಿಬಾಯಿ ಮತ್ತು ಸುಧಾಬಾಯಿ ಮೃತಪಟ್ಟಿದ್ದಾರೆ. ತಿಪ್ಪನಾಯ್ಕ, ರಮ್ಯಾ ದಾವಣಗೆರೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

- Advertisement -

ಮನೆಯಲ್ಲಿ ಮುದ್ದೆ ಸೇವಿಸಿದವರಲ್ಲಿ ನಾಲ್ವರು ಸಾವನ್ನಪ್ಪಿದ್ದು, ಒಬ್ಬರ ಸ್ಥಿತಿ ಗಂಭಿರವಾಗಿದೆ. ಆದರೆ ಅದೃಷ್ಟವಶಾತ್ ಮುದ್ದೆ ಸೇವಿಸದ ರಕ್ಷಿತಾ (17) ಅನ್ನವನ್ನು ಊಟ ಮಾಡಿದ ಪರಿಣಾಮ ಯಾವುದೇ ಸಮಸ್ಯೆ ಆಗಿಲ್ಲ. ಹೀಗಾಗಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಎಸ್ಪಿ ಜಿ.ರಾಧಿಕಾ ಅವರು ಬಾಲಕಿಯಿಂದ ಮಾಹಿತಿ ಸಂಗ್ರಹಿಸಿದರು. ಅಲ್ಲದೇ ಜಿಲ್ಲಾ ಆರೋ ಗ್ಯಾಧಿಕಾರಿ ಡಾ.ರಂಗನಾಥ್ ಸ್ಥಳಕ್ಕೆ ಭೇಟಿ ನೀಡಿ, ಮೃತರು ಸೇವಿಸಿರುವ ಆಹಾರ ಪದಾರ್ಥಗಳ ಸ್ಯಾಂಪಲ್ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಈ ವೇಳೆ ಸ್ಥಳ ಪರಿಶೀಲನೆ ನಡೆಸಿ ಬಳಿಕ ಪ್ರತಿಕ್ರಿಯಿಸಿರುವ ಎಸ್ ಪಿ ರಾಧಿಕಾ ಅವರು ದಿಢೀರ್ ಆಗಿ ಒಂದೇ ಮನೆಯಲ್ಲಿ ಈ ರೀತಿ ಆಕಸ್ಮಿಕವಾಗಿ ಮೂವರು ಸಾವಿಗೀಡಾಗಿದ್ದು ನಿಖರ ಕಾರಣ ತಿಳಿದು ಬಂದಿಲ್ಲ. ವಿಷಾಹಾರ ಸೇವನೆಯೇ ಸಾವಿಗೆ ಕಾರಣ ಎಂದು ಅನುಮಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಕಳೆದ ವರ್ಷ ಸಹ ಇದೇ ವೇಳೆ ಇವರ ಮನೆಯಲ್ಲಿ ಮೀನು ಸಾಂಬರಿಗೆ ಯಾರೋ ಕಿಡಿಗೇಡಿಗಳು ವಿಷ ಹಾಕಿದ್ದರು ಎಂಬ ಮಾಹಿತಿಯನ್ನು ಅಲ್ಲಿನ ಗ್ರಾಮಸ್ಥರು ತಿಳಿಸಿದ್ದು, ಪ್ರಕರಣದ ಸುತ್ತ ಅನುಮಾನ ಮೂಡಿದೆ. ಈ ಸಂಬಂಧ ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Join Whatsapp