ಬೆಂಗಳೂರು: ಕಾಸರಗೋಡು ಜಿಲ್ಲೆಯ ಗ್ರಾಮಗಳ ಹೆಸರುಗಳನ್ನು ಬದಲಾಯಿಸುವ ಸಂಬಂಧ ಯಾವುದೇ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ರಾಜ್ಯದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯೆ ನೀಡಿ ಪತ್ರ ಬರೆದಿರುವ ಅವರು, ಕಾಸರಗೋಡು ಜಿಲ್ಲೆಯ ಗ್ರಾಮಗಳ ಹೆಸರು ಬದಲಾಯಿಸುವ ಕುರಿತು ಯಾವುದೇ ನಿರ್ಧಾರಗಳನ್ನೂ ಕೈಗೊಳ್ಳಲಾಗಿಲ್ಲ. ಉಭಯ ರಾಜ್ಯಗಳ ಜನರ ನಡುವಿನ ಸೌಹಾರ್ದತೆಯನ್ನು ಉಳಿಸಿ, ಬೆಳೆಸುವ ಸಂಬಂಧ ತಾವು ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ನಾವು ಗೌರವಿಸುತ್ತೇವೆ ಎಂದು ಹೇಳಿದ್ದಾರೆ.
ಕೋವಿಡ್ ಸಾಂಕ್ರಾಮಿಕದಿಂದಾಗಿ ನಮ್ಮ ರಾಜ್ಯದ ಎಲ್ಲ ಶಾಲೆಗಳನ್ನು ಮುಚ್ಚಲಾಗಿದ್ದು, ಆನ್‍ಲೈನ್ ತರಗತಿಗಳು ನಡೆಯುತ್ತಿವೆ. ಕನ್ನಡ ಮಾಧ್ಯಮ ತರಗತಿಗಳನ್ನು ಸ್ಥಳೀಯ ಕೆಬಲ್ ಚಾನೆಲ್‍ಗಳ ಮೂಲಕ ಕೈಗೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.