ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅದಾನಿ ಕೈಗೆ

Prasthutha|

ಮುಂಬೈ: ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹವು ಇಂದು(ಜುಲೈ 13, 2021) ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ ಎಂದು ಘೋಷಣೆ ಮಾಡಲಾಗಿದೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿದ ಗೌತಮ್ ಅದಾನಿ, ವಿಶ್ವ ದರ್ಜೆಯ ಮುಂಬೈ ವಿಮಾನ ನಿಲ್ದಾಣದ ಆಡಳಿತ ಮಂಡಳಿಯನ್ನು ಸುಪರ್ದಿಗೆ ತೆಗೆದುಕೊಳ್ಳುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ. ಮುಂಬೈ ಹೆಮ್ಮೆ ಪಡುವಂತೆ ನಾವು ಮಾಡುತ್ತೇವೆ ಎಂದು ಮಾತು ಕೊಡುತ್ತೇವೆ. ಭವಿಷ್ಯದ ಉದ್ಯಮ, ಬಿಡುವು ಹಾಗೂ ಮನರಂಜನೆ ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಅದಾನಿ ಸಮೂಹದಿಂದ ವಿಮಾನ ನಿಲ್ದಾಣದಲ್ಲಿ ಎಕೋ ಸಿಸ್ಟಮ್ ರೂಪಿಸಲಾಗುವುದು. ನಾವು ಸಾವಿರಾರು ಸಂಖ್ಯೆಯಲ್ಲಿ ಸ್ಥಳೀಯ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ ಎಂದು ಹೇಳಿದ್ದಾರೆ.

ಅದಾನಿ ಎಂಟರ್​ಪ್ರೈಸಸ್​ ನ ಸಂಪೂರ್ಣ ಒಡೆತನದಲ್ಲಿ ಇರುವ ಸಂಸ್ಥೆ ಅದಾನಿ ಏರ್​ಪೋರ್ಟ್ ಹೋಲ್ಡಿಂಗ್ಸ್ (AAHL). ಈ ವರ್ಷದ ಶುರುವಿನಲ್ಲಿ ಎಸಿಎಸ್​ಎ ಗ್ಲೋಬಲ್ (ACSA) ಮತ್ತು ಬಿಡ್ ಸರ್ವೀಸ್ ವಿಭಾಗ (ಮಾರಿಷಿಯಸ್) ಅಥವಾ ಬಿಡ್​ವೆಸ್ಟ್​ನಿಂದ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (MIAL) ಶೇ 23.5ರಷ್ಟು ಪಾಲನ್ನು 1,685.25 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. MIALನ ಹತೋಟಿಯಲ್ಲಿ ಇಟ್ಟುಕೊಳ್ಳಬಹುದಾದಷ್ಟು ಷೇರು ಖರೀದಿಯ ಭಾಗವಾಗಿ ಈ ಮೇಲ್ಕಂಡ ಖರೀದಿ ಆಗಿತ್ತು.ಲಖನೌ, ಜೈಪುರ್, ಗುವಾಹಟಿ, ಅಹ್ಮದಾಬಾದ್, ತಿರುವನಂತಪುರಂ ಮತ್ತು ಮಂಗಳೂರು ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ (PPP) ಕಾರ್ಯನಿರ್ವಹಣೆ ಮಾಡುವುದಕ್ಕೆ ಈಚೆಗೆ ಅದಾನಿ ಸಮೂಹಕ್ಕೆ ಅನುಮತಿ ಸಿಕ್ಕಿದೆ. ಬಂದರಿನಿಂದ ವಿದ್ಯುಚ್ಛಕ್ತಿ ತನಕ ಅದಾನಿ ಸಮೂಹದಲ್ಲಿ ಎಲ್ಲ ಕಂಪೆನಿಗಳಿವೆ. ಕಳೆದ ತಿಂಗಳು ಎಂಎಸ್​ಸಿಐ ಇಂಕ್​ ನಿಂದ ಅದಾನಿಯ ಮೂರು ಸಂಸ್ಥೆಗಳನ್ನು ಭಾರತದ ಬೆಂಚ್​ ಮಾರ್ಕ್ ಸೂಚ್ಯಂಕಕ್ಕೆ ಮೇ ತಿಂಗಳಲ್ಲಿ ಸೇರ್ಪಡೆ ಮಾಡಲಾಯಿತು. ಇದೀಗ ವಿಮಾನ ನಿಲ್ದಾಣಗಳ ನಿರ್ವಹಣೆ ಜವಾಬ್ದಾರಿ ಸಹ ಅದಾನಿ ಕಂಪೆನಿಯ ಕೈ ಸೇರಿವೆ.



Join Whatsapp