ಹೊಸದಿಲ್ಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೋವಿಡ್ ಲಸಿಕೆಯನ್ನು ಹೆಚ್ಚಿಸುವ ಬದಲು ಸಚಿವ ಸಂಪುಟವನ್ನು ವಿಸ್ತರಿಸುತ್ತಿರುವುದು ಆತಂಕ ಸೃಷ್ಟಿಸಿದೆಯೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ದೇಶದಲ್ಲಿ ವ್ಯಾಕ್ಸಿನೇಶನ್ ಆಗುತ್ತಿರುವವರ ಅಂಕಿಅಂಶಗಳನ್ನು ಬಹಿರಂಗಪಡಿಸಿದ್ದಾರೆ.
ಭಾರತಕ್ಕೆ ಕೊರೊನಾ 3 ನೇ ಅಲೆ ಅಪ್ಪಳಿಸದಂತೆ ತಡೆಯುವ ನಿಟ್ಟಿನಲ್ಲಿ ಶೇಕಡಾ 60 ರಷ್ಟು ವಾಕ್ಸಿನೇಷನ್ ಆಗುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಪ್ರತಿನಿತ್ಯ 88 ಲಕ್ಷ ಮಂದಿಗೆ ಕೋವಿಡ್ ಲಸಿಕೆ ಕೊಡಲೇ ಬೇಕಾಗಿದೆ. ಆದರೆ ಭಾರತದಲ್ಲಿ ಪ್ರಸಕ್ತ ಅಷ್ಟು ಪ್ರಮಾಣದಲ್ಲಿ ಕೊಡಲಾಗುತ್ತಿಲ್ಲ. ಇದು ಕೊರೊನಾ 3 ನೇ ಅಲೆಯ ಪ್ರತಿರೋಧ ಪ್ರಕ್ರಿಯೆಯಲ್ಲಿ ಹಿನ್ನಡೆಯಾಗಲಿದೆಯೆಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಕೇಂದ್ರ ಸರ್ಕಾರ ಕೊರೋನಾ 3 ನೇ ಅಲೆಯನ್ನು ಶಕ್ತವಾಗಿ ಎದುರಿಸಲು ಸಜ್ಜಾಗುವ ಬದಲು ತನ್ನ ಸಚಿವ ಸಂಪುಟವನ್ನು ವಿಸ್ತರಿಸುತ್ತಿರುವ ಕೇಂದ್ರದ ಮನಸ್ಥಿತಿಯನ್ನು ದೇಶದ ಜನತೆ ಅರ್ಥೈಸಬಹುದೆಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಕುಟುಕಿದ್ದಾರೆ.