ಫಾದರ್ ಸ್ಟ್ಯಾನ್ ಸ್ವಾಮಿಯವರ ಸಾವಿನ ವಿಷಯದಲ್ಲಿ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಶಿವಸೇನೆ ಸಂಸದ ಸಂಜಯ್ ರಾವತ್, ಬುಡಕಟ್ಟು-ಹಕ್ಕುಗಳ ಹೋರಾಟಗಾರನನ್ನು ಜೈಲಿನಲ್ಲಿ “ಹತ್ಯೆ ಮಾಡಲಾಗಿದೆ” ಎಂದು ಆರೋಪಿಸಿದ್ದಾರೆ.
84 ವರ್ಷದ ವ್ಯಕ್ತಿಯೊಬ್ಬರು ನರೇಂದ್ರ ಮೋದಿ ಸರ್ಕಾರವನ್ನು ಉರುಳಿಸುವಷ್ಟರ ಮಟ್ಟಿಗೆ ದೇಶದ ಅಡಿಪಾಯ ದುರ್ಬಲವಾಗಿದೆಯೇ ಎಂದು ಪ್ರಶ್ನಿಸಿರುವ ರಾವತ್, ಮೋದಿ ಸರ್ಕಾರವನ್ನು ಹಿಟ್ಲರ್ ಮತ್ತು ಮುಸೊಲಿನಿಯವರೊಂದಿಗೆ ಹೋಲಿಸಿದ್ದಾರೆ.
ಅಕ್ಟೋಬರ್ ನಲ್ಲಿ ಎಲ್ಗಾರ್ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯಿಂದ ಬಂಧನಕ್ಕೊಳಗಾಗಿದ್ದ ಸ್ವಾಮಿ ಅವರು ಜುಲೈ 5 ರಂದು ನ್ಯಾಯಾಂಗ ಬಂಧನದಲ್ಲಿರುವಾಗ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಸರ್ಕಾರವನ್ನು ಉರುಳಿಸಲು ಸಂಚು ಹೂಡಿದ್ದಾರೆ ಎಂದು ಜಾರ್ಜ್ ಫರ್ನಾಂಡಿಸ್ ವಿರುದ್ಧ ಆರೋಪ ಮಾಡಿದ್ದ ಇಂದಿರಾ ಗಾಂಧಿಯವರ ಆಡಳಿತಕ್ಕೆ ಈ ಸರ್ಕಾರವನ್ನು ರಾವತ್ ಹೋಲಿಸಿದ್ದಾರೆ.
“ಇಂದಿರಾ ಗಾಂಧಿಯವರು ಜಾರ್ಜ್ ಫರ್ನಾಂಡಿಸ್ ಗೆ ಹೆದರುತ್ತಿದ್ದರು. ಜಾರ್ಜ್ ಆಗ ಯುವ ನಾಯಕರಾಗಿದ್ದರು. ಫಾದರ್ ಸ್ಟ್ಯಾನ್ ಸ್ವಾಮಿಯಂತೆ ವಯಸ್ಸಾಗಿರಲಿಲ್ಲ. ಆದರೆ ಇಂದಿನ ಸರ್ಕಾರವು 84-85 ವರ್ಷ ವಯಸ್ಸಿನ ಸ್ಟ್ಯಾನ್ ಸ್ವಾಮಿ ಮತ್ತು ವರವರರಾವ್ ಅವರಿಗೆ ಹೆದರಿದೆ. ಸ್ಟ್ಯಾನ್ ಸ್ವಾಮಿಯವರನ್ನು ಜೈಲಿನಲ್ಲಿ ಕೊಲ್ಲಲಾಗಿದೆ ಎಂದು ರಾವತ್ ಹೇಳಿದರು.