ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ 8 ವಲಯಗಳ ಪೊಲೀಸರು 1000 ಕ್ಕೂ ಅಧಿಕ ರೌಡಿಗಳ ಮನೆ ಮೇಲೆ ಮಿಂಚಿನ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ರೌಡಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ.
ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೂ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ಇಂದು ನಸುಕಿನಲ್ಲಿ ದಿಢೀರ್ ದಾಳಿ ಮಾಡಿ ಶೋಧ ನಡೆಸಿದರು. ಕಾರಾಗೃಹದಲ್ಲೇ ಕೊಲೆಗಳಿಗೆ ಸಂಚು ರೂಪಿಸಲಾಗುತ್ತಿದೆ, ಇತ್ತೀಚೆಗೆ ಹತ್ಯೆಯಾದ ಮಾಜಿ ಬಿಬಿಎಂಪಿ ಸದಸ್ಯೆ ರೇಖಾ ಕದಿರೇಶ್ ಅವರ ಹತ್ಯೆಗೂ ಜೈಲಿನಲ್ಲೇ ಮುಹೂರ್ತ ನಿಗದಿಪಡಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು.
ಸಿಸಿಬಿಯ ವಿಶೇಷ ತಂಡಗಳು, ಮುಂಜಾನೆಯಿಂದ ಜೈಲಿನೊಳಗೆ ದಾಳಿ ಮಾಡಿ ಎಲ್ಲ ಬ್ಯಾರಕ್ಗಳಲ್ಲಿ ತಪಾಸಣೆ ನಡೆಸಿದವು. ಮೊಬೈಲ್ಗಳು, ಸಿಮ್ ಕಾರ್ಡ್ಗಳು, ಗಾಂಜಾ, ಚಾಕು ಸೇರಿದಂತೆ ಹಲವು ವಸ್ತುಗಳು ಕೈದಿಗಳ ಬಳಿ ದೊರೆತಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.
‘ಹೊರಗಿನಿಂದ ಮಾದಕ ವಸ್ತು ಜೈಲಿನೊಳಗೆ ಪೂರೈಕೆ ಆಗುತ್ತಿರುವುದು ಗೊತ್ತಾಗಿದೆ. ಈ ಬಗ್ಗೆ ಜೈಲು ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ರೌಡಿ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊಲೆ, ಕೊಲೆಯತ್ನ, ಸುಲಿಗೆ, ಬೆದರಿಕೆ ಇನ್ನಿತರ ಅಪರಾಧ ಕೃತ್ಯಗಳು ನಡೆಯುತ್ತಿದ್ದು ಇವುಗಳನ್ನು ಹತ್ತಿಕ್ಕಲು ನಗರದ ವಿವಿಧ ವಿಭಾಗಗಳಲ್ಲಿ ಪೊಲೀಸರು ಮುಂಜಾನೆಯಿಂದ ಕಾರ್ಯಾಚರಣೆ ನಡೆಸಿದ್ದಾರೆ.
ನಗರದ ಕೇಂದ್ರ, ಪಶ್ಚಿಮ, ಉತ್ತರ, ಈಶಾನ್ಯ, ವೈಟ್ ಪೀಲ್ಡ್ ಇತರ ವಿಭಾಗದಲ್ಲಿ ಪೊಲೀಸರು ರೌಡಿಗಳು ಹಳೆ ಕುಖ್ಯಾತ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಕೆಲವು ರೌಡಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಅವರ ವಿಳಾಸ ಮೊಬೈಲ್ ಸಂಖ್ಯೆ ಉದ್ಯೋಗ ಕುಟುಂಬದ ವಿವರ ಕಲೆಹಾಕಿ ಮುಂದೆ ರೌಡಿ ಚಟುವಟಿಕೆಗಳಲ್ಲಿ ತೊಡಗುವುದಾಗಲಿ ಅಪರಾಧ ಕೃತ್ಯ ನಡೆಸುವುದು ಬೇರೆಯವರಿಗೆ ನೆರವು ನೀಡುವುದಾಗಲಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ಕೊಟ್ಟು ಕಳುಹಿಸಲಾಗಿದೆ.
ಉತ್ತರ ವಿಭಾಗದಲ್ಲಿ 230ಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಅವರನ್ನು ಮಲ್ಲೇಶ್ವರಂ ಆಟದ ಮೈದಾನಕ್ಕೆ ಕರೆತಂದು ಪರೇಡ್ ನಡೆಸಲಾಗಿದೆ. ಪಶ್ಚಿಮ ವಿಭಾಗದಲ್ಲಿ ಮಜಾನೆಯಿಂದಲೇ ರೌಡಿಗಳ ಮನೆ ಮೇಲೆ ದಾಳಿ ನಡೆಸಲಾಗಿದ್ದು ಚಳಿಯಲ್ಲೂ ಬಿಸಿ ಮುಟ್ಟಿಸಿ ಖಾಯಂ ವಿಳಾಸ ಮೊಬೈಲ್ ಸಂಖ್ಯೆ ಉದ್ಯೋಗ ಕುಟುಂಬದ ವಿವರ ಕಲೆಹಾಕಲಾಗಿದೆ. ದಾಳಿ ನಡೆಸಿದ ರೌಡಿಗಳಿಗೆ ಇನ್ನು ಮುಂದೆ ಚಟುವಟಿಕೆಗಳಲ್ಲಿ ತೊಡಗುವುದಾಗಲಿ ಅಪರಾಧ ಕೃತ್ಯ ನಡೆಸುವುದು ಬೇರೆಯವರಿಗೆ ನೆರವು ನೀಡುವುದಾಗಲಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ಕೊಟ್ಟು ಕಳುಹಿಸಲಾಗಿದೆ.
ಕೊರೊನಾ ಲಾಕ್ಡೌನ್ ತೆರವುಗೊಂಡ ಬಳಿಕ ರೌಡಿ ಚಟುವಟಿಕೆಗಳು ಹೆಚ್ಚಾಗಿದ್ದು ಹಣಕಾಸು ವ್ಯವಹಾರ, ವೈಯಕ್ತಿಕ ದ್ವೇಷ ಹತ್ತು ಹಲವು ಕಾರಣಗಳಿಂದ ಕೊಲೆ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದವು. ಜೈಲಿನಿಂದಲೇ ಕುಳಿತು ರೌಡಿ ಚಟುವಟಿಕೆ ನಿಯಂತ್ರಣದ ಬಗ್ಗೆಯೂ ತನಿಖೆ ವೇಳೆ ಬಯಲಾಗಿತ್ತು. ಹೀಗಾಗಿ ಹೆಚ್ಚುವರಿ ಆಯುಕ್ತರು ಮತ್ತು ಡಿಸಿಪಿಗಳೊಂದಿಗೆ ಸಭೆ ನಡೆಸಿದ್ದ ಕಮಿಷನರ್ ಕಮಲ್ ಪಂತ್ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ಸೂಚಿಸಿದ್ದರು.
ಅದರಂತೆ ಹಲವು ದಿನಗಳಿಂದ ಆಯಾ ಪೊಲೀಸ್ ವಿಭಾಗದ ವ್ಯಾಪ್ತಿಯಲ್ಲಿ ರೌಡಿಗಳ ಮೇಲೆ ಪೊಲೀಸರು ನಿಗಾವಹಿಸಿದ್ದು ರೌಡಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಬಾಲ ಬಿಚ್ಚದಂತೆ ರೌಡಿ ಎಚ್ಚರಿಕೆ ನೀಡಲಾಗಿದೆ.