ಹೊಸದಿಲ್ಲಿ: ಕೊರೋನಾ ಎರಡನೇ ಅಲೆಯ ನಂತರ ಪ್ರಧಾನಿ ನರೇಂದ್ರ ಮೋದಿಯವರು 13 ಜಾಗತಿಕ ಜನಪ್ರಿಯ ನಾಯಕರ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ.
ಅಮೆರಿಕದ ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆಯ ಪ್ರಕಾರ ಜೂನ್ 29ರಲ್ಲಿದ್ದಂತೆ ಮೋದಿ ಅವರ ಟಾಪ್ ಸ್ಥಾನ ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುವೆಲ್ ಲೋಪೆಝ್ ಒಬ್ರಡೊರ್ ಅವರ ಪಾಲಾಗಿದೆ. ಭಾರತದಲ್ಲಿ ಸಾಕಷ್ಟು ಸಾವುನೋವುಗಳಿಗೆ ಕಾರಣವಾದ ಕೋವಿಡ್- 19 ನಿಂದಾಗಿ ಮೋದಿ ಅವರ ಅಪ್ರೂವಲ್ ರೇಟಿಂಗ್( ಉತ್ತಮ ನಾಯಕರೆಂದು ಒಪ್ಪುವ ಜನರ ಪ್ರಮಾಣ) ಮಾರ್ಚ್ ಅಂತ್ಯದ ವೇಳೆಗೆ ಶೇ. 14 ರಷ್ಟು ಕಡಿಮೆಯಾದರೆ ಮೇ 2020ರಿಂದೀಚೆಗೆ ಶೇ. 34 ರಷ್ಟು ಕಡಿಮೆಯಾಗಿದೆ.
ಭಾರತದಲ್ಲಿ ಕೋವಿಡ್ ಎರಡನೇ ಅಲೆಯನ್ನು ಸರಕಾರ ಸಮಾಧಾನಕರವಾಗಿ ನಿಭಾಯಿಸಿಲ್ಲ ಎಂಬ ವ್ಯಾಪಕ ಟೀಕೆಯ ನಡುವೆ ಈ ವರದಿ ಹೊರಬಿದ್ದಿದೆ. ಮೋದಿ ಹೊರತಾಗಿ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರಾನ್ ಮತ್ತು ಜಪಾನ್ ಪ್ರಧಾನಿ ಯೋಶಿಹಿಡೆ ಸುಗ ಅವರ ರೇಟಿಂಗ್ ಕೂಡ ಕ್ರಮವಾಗಿ ಶೇ. 6 ಹಾಗೂ ಶೇ.9 ರಷ್ಟು ಕಡಿಮೆಯಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಅಪ್ರೂವಲ್ ರೇಟಿಂಗ್ ಶೇ. 4 ರಷ್ಟು ಕಡಿಮೆಯಾಗಿದೆ.