ವಿಶ್ವದ ಅತ್ಯಂತ ಸುರಕ್ಷಿತ 134 ದೇಶಗಳ ಪಟ್ಟಿಯಲ್ಲಿ, ಐಸ್ ಲ್ಯಾಂಡ್ ಮೊದಲ ಸ್ಥಾನದಲ್ಲಿದ್ದರೆ, ಯುಎಇ ಎರಡನೇ ಸ್ಥಾನದಲ್ಲಿದೆ. ಹಾಗೂ ಭಾರತ 91 ನೇ ಸ್ಥಾನ ಪಡೆದುಕೊಂಡಿದೆ ಎಂದು ಗ್ಲೋಬಲ್ ಫೈನಾನ್ಸ್ ಮ್ಯಾಗಝಿನ್ಸ್ ಸೂಚ್ಯಂಕ ವರದಿ ಮಾಡಿದೆ.
ಯುದ್ಧ ಮತ್ತು ಶಾಂತಿ, ವೈಯಕ್ತಿಕ ಭದ್ರತೆ ಮತ್ತು ಪ್ರಾಕೃತಿಕ ವಿಕೋಪ ಅಪಾಯ ಎಂಬ 3 ಮೂಲಭೂತ ವಿಷಯಗಳನ್ನು ಸೂಚ್ಯಂಕದಲ್ಲಿ ಪರಿಗಣಿಸಲಾಗಿದೆ. ಜೊತೆಗೆ ಸದೃಢ ಆರೋಗ್ಯ ಕ್ಷೇತ್ರ ಮತ್ತು ಕೋವಿಡ್ ಲಸಿಕೀಕರಣ ಅಭಿಯಾನದ ಯಶಸ್ಸು ಯುಎಇ ಸಾಧನೆಗೆ ಕಾರಣವಾಗಿದೆ. ವಿಶ್ವದ ಅತ್ಯಧಿಕ ಲಸಿಕೀಕರಣ ದೇಶವಾಗಿರುವ ಯುಎಇಯಲ್ಲಿ 64.3% ಶೇ. ಜನತೆ ಸಂಪೂರ್ಣ ಲಸಿಕೆ ಪಡೆದಿದ್ದಾರೆ.
ಐಸ್ ಲ್ಯಾಂಡ್, ಯುಎಇ, ಖತರ್, ಸಿಂಗಾಪುರ, ಫಿನ್ ಲ್ಯಾಂಡ್, ಮಂಗೋಲಿಯಾ, ನಾರ್ವೆ, ಡೆನ್ಮಾರ್ಕ್, ಕೆನಡಾ ಮತ್ತು ನ್ಯೂಝಿಲ್ಯಾಂಡ್ ಅಗ್ರ 10 ಸ್ಥಾನದಲ್ಲಿದೆ. ನೈಜೀರಿಯಾ, ಬೋಸ್ನಿಯಾ ಮತ್ತು ಹೆರ್ಝೆಗೊವಿನಾ, ಬ್ರೆಝಿಲ್, ಮೆಕ್ಸಿಕೊ, ಪೆರು, ಯೆಮನ್ ಮತ್ತು ನಾರ್ತ್ ಮೆಸಿಡೋನಿಯಾ ದೇಶಗಳು ತಳಮಟ್ಟದಲ್ಲಿವೆ.
ಯೆಮನ್ ನ ಅಮಾನುಷ ಅಂತರ್ಯುದ್ಧ ಮತ್ತು ಎಲ್ ಸಾಲ್ವದೋರ್ ನ ಅತ್ಯಧಿಕ ಹತ್ಯೆ ಪ್ರಮಾಣದಿಂದಾಗಿ ಈ ದೇಶಗಳು ಸುರಕ್ಷಿತ ಪಟ್ಟಿಯಲ್ಲಿ ಯಾವುದೇ ಸುಧಾರಣೆ ಸಾಧಿಸಲು ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.