ಮಂಗಳೂರು | ಲೋಪದೋಷಗಳಿಲ್ಲದೆ ಎಚ್ಚರಿಕೆಯಿಂದ SSLC ಪರೀಕ್ಷೆ ನಡೆಸಲು ಸಿಒಓ ಸೂಚನೆ

Prasthutha|

ಮಂಗಳೂರು: ಇದೇ ಜು.19 ಹಾಗೂ 22 ರಂದು ನಡೆಯಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಯಾವುದೇ ರೀತಿಯ ಲೋಪದೋಷಗಳಿಗೆ ಅವಕಾಶವಿರದಂತೆ ಎಚ್ಚರಿಕೆಯಿಂದ ಪರೀಕ್ಷಾ ಕಾರ್ಯಗಳನ್ನು ನಿರ್ವಹಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಅವರು ನಗರದ ಲೇಡಿ ಹಿಲ್‍ನ ವಿಕ್ಟೋರಿಯಾ ಪ್ರೌಢಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳ ಸಿದ್ದತೆಗಳ ಕುರಿತು ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

- Advertisement -

ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಪ್ರಮುಖ ಘಟ್ಟವಾಗಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ಕೋವಿಡ್-19 ಸೋಂಕಿನ ಹಿನ್ನಲೆಯ್ಲಲಿ ಎಚ್ಚರಿಕೆಯಿಂದ ನಿರ್ವಹಿಸಬೇಕಿದೆ, ಆದ ಕಾರಣ ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು, ಪರೀಕ್ಷಾ ಸಿಬ್ಬಂದಿಗಳು, ಮೇಲ್ವಿಚಾರಕರು ಮಾಸ್ಕ್ ಧರಿಸಬೇಕು, ಪರೀಕ್ಷೆಯಲ್ಲಿ ಪರಸ್ಪರ ಸಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದ್ದು, ಎಲ್ಲಾ ಕೊಠಡಿಗಳನ್ನು ಸ್ಯಾನಿಟೈಜ್ ಮಾಡಿಸಬೇಕು ಹಾಗೂ ಅಗತ್ಯ ಮೇಜು ಹಾಗೂ ಖುರ್ಚಿಗಳನ್ನು ಹಾಕಿಸಬೇಕು ಎಂದರು.

ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಮಾದರಿ ವಿಭಿನ್ನವಾಗಿದ್ದು, ಒಎಂಆರ್ ಶೀಟ್‍ಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು, ಒಟ್ಟಾರೆ ಪರೀಕ್ಷೆಗಳ ರೂಪು ರೇಷೆಗಳನ್ನು ಅವರಿಗೆ ತಿಳಿಸಿಕೊಡುವ ಕೆಲಸವನ್ನು ಶಿಕ್ಷಕರು ಮಾಡಬೇಕು, ಅದಕ್ಕಾಗಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಬೇಕು ಎಂದು ಹೇಳಿದರು.

- Advertisement -

ಗ್ರಾಮೀಣ ಪ್ರದೇಶದಲ್ಲಿ ಪರೀಕ್ಷಾ ಸಿದ್ಧತೆ ಮತ್ತು ಪೂರ್ವ ತಯಾರಿಗಳ ಬಗ್ಗೆ ಆನ್‍ಲೈನ್ ತರಗತಿಯ ಮೂಲಕ ತಿಳಿಸಿಕೊಡುವ ಕೆಲಸವನ್ನು ಆಯಾ ಶಾಲೆಯ ಶಿಕ್ಷಕರು ಮಾಡಬೇಕು, ಪರೀಕ್ಷಾ ಹಿಂದಿನ ದಿನವೇ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸರ್ ಮಾಡಬೇಕು ಮತ್ತು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನಿಂಗ್‍ಗೆ ಒಳಪಡಿಸಬೇಕು, ಪರೀಕ್ಷಾ ಕೇಂದ್ರಗಳನ್ನು ಬೆಳಿಗ್ಗೆ 8 ಗಂಟೆಗೆ ತೆರೆಯಬೇಕು. ಒಂದು ವೇಳೆ ಪರೀಕ್ಷಾರ್ಥಿಯು ಕೋವಿಡ್-19 ಸೋಂಕು ಹೊಂದಿ ಪರೀಕ್ಷೆ ಬರೆಯುವಲ್ಲಿ ಇಚ್ಛಿಸಿದಲ್ಲಿ, ಅಂತಹ ವಿದ್ಯಾರ್ಥಿಗಳನ್ನು ಕೋವಿಡ್ ಕೇರ್ ಸೆಂಟರ್‍ಗಳಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಹಾಗೂ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಅವರಿಗೆ ಅಗತ್ಯ ಸೌಕರ್ಯವನ್ನು ಕೂಡ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲೇಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಪೂಂಜಾ, ದೈಹಿಕ ಶಿಕ್ಷಣ ಅಧಿಕಾರಿ ರಘುನಾಥ್ ಹಾಗೂ ಇತರರು ಸಭೆಯಲ್ಲಿದ್ದರು.
ಎಲ್ಲಾ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರೊಂದಿಗೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.



Join Whatsapp