ಬೆಂಗಳೂರು: ಹಾಡಹಗಲೇ ಬನಶಂಕರಿಯ ದೇವಾಲಯದ ಬಳಿ ಫೈನಾನ್ಶಿಯರ್ ಮದನ್ ಎಂಬವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದ ಇಬ್ಬರು ಆರೋಪಿಗಳ ಕಾಲಿಗೆ ಇಂದು ಬೆಳ್ಳಂಬೆಳಿಗ್ಗೆ ದಕ್ಷಿಣ ವಿಭಾಗದ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ. ಪೊಲೀಸರ ಗುಂಡೇಟು ತಗುಲಿರುವ ಸಿದ್ದಾಪುರದ ಮಹೇಶ್(35) ಹಾಗೂ ವಿಲ್ಸನ್ ಗಾರ್ಡನ್ ನ ನವೀನ್ (27) ಎಂದು ಗುರುತಿಸಲಾಗಿದೆ.
ಇವರಿಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಮಹಜರು ವೇಳೆ ಆರೋಪಿಗಳು ತಪ್ಪಿಸಿಕೊಳ್ಳಲು ಹೋದಾಗ ಬೆನ್ನಟ್ಟಿ ಹಿಡಿಯಲು ಹೋದ ಸಬ್ ಇನ್ಸ್ಪೆಕ್ಟರ್
ಚಂದನ್ ಕಾಳೆ ಹಾಗೂ ಎಎಸ್ ಐ ಲಕ್ಷ್ಮಣ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಅವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಧಿತ ಆರೋಪಿಗಳು ಇನ್ನೂ ನಾಲ್ವರ ಜೊತೆ ಸೇರಿ ಕಳೆದ ಜು.2 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಬನಶಂಕರಿ ದೇವಾಲಯ ಮುಂದೆ ಲಕ್ಕಸಂದ್ರದ ಫೈನಾನ್ಸಿಯರ್ ಮದನ್ನನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದರು.
ಕೃತ್ಯ ಎಸಗಿ ಮೂರು ದಿನಗಳ ಬಳಿಕ ನಿನ್ನೆ ವಕೀಲರ ಧಿರಿಸಿನಲ್ಲಿ ನಗರದ 37ನೇ ಎಸಿಎಂಎಂ ನ್ಯಾಯಾಲಯ ಮುಂದೆ ಶರಣಾಗಿದ್ದರು. ಕೋವಿಡ್ ನಿಯಮ ಪ್ರಕಾರ ಕೋರ್ಟ್ ಪ್ರವೇಶಕ್ಕೆ ನಿಷೇಧ ಇರುವ ಹಿನ್ನೆಲೆಯಲ್ಲಿ ಜಯನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ನಿನ್ನೆ ವಿಚಾರಣೆಗೆ ಒಳಪಡಿಸಿ ಇಂದು ಬೆಳಿಗ್ಗೆ 6.30ರ ವೇಳೆ ತಲಘಟ್ಟಪುರದ ತುರಹಳ್ಳಿ ಅರಣ್ಯದ ನಾಗಗೌಡನಪಾಳ್ಯದ ಬಳಿ ಮದನ್ ಕೊಲೆಗೈದು ಬಿಸಾಡಿದ್ದ ಮಾರಕಾಸ್ತ್ರ ಜಪ್ತಿ ಮಾಡಿಕೊಳ್ಳಲು ಮಹೇಶ್ ಹಾಗೂ ನವೀನ್ ನನ್ನು ಕರೆದೊಯ್ಯಲಾಗಿತ್ತು.
ಜಪ್ತಿಯ ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಕೊಡಲೇ ಬೆನ್ನಟ್ಟಿ ಹಿಡಿಯಲು ಮುಂದಾದ ಸಬ್ ಇನ್ಸ್ಪೆಕ್ಟರ್ ಚಂದನ್ ಕಾಳೆ ಹಾಗೂ ಎಎಸ್ ಐ ಲಕ್ಷ್ಮಣ ಅವರ ಮೇಲೆ ಹಲ್ಲೆ ಮಾಡಿದ್ದು ತಪ್ಪಿಸಿಕೊಳ್ಳದಂತೆ ಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಸುದರ್ಶನ್ ಎಚ್ಚರಿಕೆ ಕೊಟ್ಟು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಆದರೂ, ಪೊಲೀಸರ ಹಲ್ಲೆ ಮಾಡಲು ಮುಂದಾದಾಗ ಆತ್ಮರಕ್ಷಣೆಗಾಗಿ ಎಸಿಪಿ ಶ್ರೀನಿವಾಸ್ ಅವರು ಮಹೇಶ್ ನತ್ತ ಗುಂಡು ಹಾರಿಸಿದ್ದು ಅದು ಬಲಗಾಲಿಗೆ ತಗುಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.ಇನ್ಸ್ಪೆಕ್ಟರ್ ಸುದರ್ಶನ್ ಹಾರಿಸಿದ ಗುಂಡು ನವೀನ್ ಎಡಗಾಲಿಗೆ ತಗುಲಿ ಕುಸಿದುಬಿದ್ದಿದ್ದು ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.
ಆರೋಪಿಗಳಾದ ಮಹೇಶ್ ಹಾಗೂ ನವೀನ್ ಬಡ್ಡಿ ವ್ಯವಹಾರ ನಡೆಸುತ್ತಿದ್ದು ವಿಲ್ಸನ್ ಗಾರ್ಡನ್, ಸಿದ್ದಾಪುರ ಇನ್ನಿತರ ಕಡೆಗಳಲ್ಲಿ ಹಣಕಾಸು ವ್ಯವಹಾರ ನಡೆಸುವ ವೇಳೆ ಉಂಟಾದ ದ್ವೇಷದ ಹಿನ್ನೆಲೆಯಲ್ಲಿ ಮದನ್ ನನ್ನು ಕೊಲೆಗೈದು ಪರಾರಿಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.