ಮುಂಬೈ: ಮಹಾರಾಷ್ಟ್ರದ 12 ಬಿಜೆಪಿ ಶಾಸಕರನ್ನು ಇಂದಿನಿಂದ ಒಂದು ವರ್ಷದವರೆಗೆ ಅಮಾನತು ಮಾಡಲಾಗಿದೆ. ವಿಧಾನಸಭೆಯ ಸ್ಪೀಕರ್ ಕಚೇರಿಯಲ್ಲಿ ಪ್ರಿಸೈಂಡಿಂಗ್ ಆಫೀಸರ್ ಭಾಸ್ಕರ್ ಜಾದವ್ ಜೊತೆಗೆ ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಅಮಾನತುಗೊಂಡ ಶಾಸಕರನ್ನು ಸಂಜಯ್ ಕುಟೆ, ಅಶಿಸ್ ಶೆಲಾರ್. ಅಭಿಮನ್ಯು ಪವಾರ್, ಗಿರೀಶ್ ಮಹಾಜನ್, ಅತುಲ್ ಭಟ್ಖಾಲ್ಕರ್, ಪರಾಗ್ ಅಲಾವಾನಿ, ಹರೀಶ್ ಪಿಂಪಾಲೆ, ಯೋಗೇಶ್ ಸಾಗರ್, ಜಯ ಕುಮಾರ್ ರವಾತ್, ನಾರಾಯಣ್ ಕುಚೆ, ರಾಮ್ ಸತ್ಪುಟ್ ಮತ್ತು ಬಂಟಿ ಭಾಂಗ್ಡಿಯಾ ಎಂದು ಗುರುತಿಸಲಾಗಿದೆ. ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಅನಿಲ್ ಪರಾಬ್ ಅವರು ಈ ನಿರ್ಣಯವನ್ನು ಮಂಡಿಸಿದ್ದು, ವಿಧಾನಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ.
ಈ 12 ಬಿಜೆಪಿ ಶಾಸಕರು ಒಂದು ವರ್ಷದ ಅವಧಿಯಲ್ಲಿ ಮುಂಬೈ ಮತ್ತು ನಾಗ್ಪುರದ ಶಾಸಕಾಂಗ ಆವರಣಕ್ಕೆ ಪ್ರವೇಶಿಸಬಾರದು ಎಂದು ಪರಾಬ್ ಹೇಳಿದ್ದಾರೆ. ದೇವೇಂದ್ರ ಫಡ್ನವಿಸ್ ನೇತೃತ್ವದ ಬಿಜೆಪಿ ಸದಸ್ಯರು ಸರ್ಕಾರದ ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರತಿಪಕ್ಷಗಳು ಸದನದ ಕಲಾಪವನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.