ಬೆಂಗಳೂರು: ಸೆಲೆಬ್ರಿಟಿಗಳ ಬಗ್ಗೆ ಹಗುರವಾಗಿ ಸುದ್ದಿ ಮಾಡುತ್ತಾ TRP ಗಿಟ್ಟಿಸಿಕೊಳ್ಳುವ ‘ಪಬ್ಲಿಕ್ ಟಿವಿ’ ವಿರುದ್ಧ ಸ್ಯಾಂಡಲ್ ವುಟ್ ನಟ, ‘ಕಿರಿಕ್ ಪಾರ್ಟಿ’ ಖ್ಯಾತಿಯ ನಾಯಕ ರಕ್ಷಿತ್ ಶೆಟ್ಟಿ ತಿರುಗಿ ಬಿದ್ದಿದ್ದಾರೆ. ಟ್ವಿಟ್ಟರ್ ಮೂಲಕ ತನ್ನ ಆಕ್ರೋಶ ಹೊರಹಾಕಿರುವ ರಕ್ಷಿತ್ ಶೆಟ್ಟಿ ಈ ಹೋರಾಟದಲ್ಲಿ ಯಾರು ಜಯಿಸುತ್ತಾರೆ ಅನ್ನೋದನ್ನ ನೋಡಿಯೇ ಬಿಡೋಣ ಅನ್ನೋ ಮೂಲಕ ಹೆಚ್ಆರ್ ರಂಗನಾಥ್ ಮಾಲಕತ್ವದ ಸುದ್ದಿ ವಾಹಿನಿ ವಿರುದ್ಧ ಸವಾಲೆಸೆದಿದ್ದಾರೆ.
“ಕಳೆದ ಎರಡು ವರುಷಗಳಲ್ಲಿ ನನ್ನ ತೇಜೋವಧೆ ಮಾಡುವಂತಹ ಸುದ್ದಿಗಳನ್ನ ಮಾಡುತ್ತಾ ಬಂದಿದ್ದೀರಿ. ಇದುವರೆಗೂ ಅದ್ಯಾವುದಕ್ಕೂ ನಾನು ಪ್ರತಿಕ್ರಿಯಿಸಿರಲಿಲ್ಲ. ಆದರೆ ಈಗ ಸುಮ್ಮನಿರಲು ಮನಸ್ಸು ಒಪ್ಪುತ್ತಿಲ್ಲ. ಇದೆಲ್ಲಕ್ಕೂ ಹತ್ತು ದಿನಗಳ ಬಳಿಕ ಉತ್ತರ ಕೊಡುತ್ತೇನೆ” ಎಂದಿದ್ದಾರೆ.
ಈ ಕುರಿತ ಟ್ವೀಟ್ ನಲ್ಲಿ ಪತ್ರವನ್ನೂ ಲಗತ್ತಿಸಿರುವ ರಕ್ಷಿತ್ ಶೆಟ್ಟಿ, ನಿಮ್ಮ ಬಳಿ TRP ಗಾಗಿ ಚಾನೆಲ್ ಇದ್ದರೆ ನನ್ನ ಬಳಿ ನನ್ನ ಶ್ರಮ, ಶ್ರದ್ಧೆ ಹಾಗೂ ಜನಬೆಂಬಲವಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ತಮ್ಮ ಈ ಟ್ವೀಟ್ ಅನ್ನು ಪಿನ್ ಮಾಡಿಕೊಂಡಿದ್ದಾರೆ. ರಕ್ಷಿತ್ ಜೊತೆ ನಿಲ್ಲುವುದಾಗಿ ಹಲವಾರು ಅಭಿಮಾನಿಗಳು ಕಾಮೆಂಟ್ ಮಾಡುವುದರ ಮೂಲಕ ಬೆಂಬಲ ಸೂಚಿಸಿದ್ದಾರೆ.
ಉಡುಪಿ ಮೂಲದ ರಕ್ಷಿತ್ ಶೆಟ್ಟಿ ಅವರ ಬಹುನಿರೀಕ್ಷಿತ ಸಿನೆಮಾ ‘777 ಚಾರ್ಲಿ’ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.