ಬೆಂಗಳೂರು; ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರು ಆರೋಪಿಗಳನ್ನು ಬೆಂಗಳೂರಿನ ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ.
ಕೊಲೆಗಾರರಿಗೆ ಸಹಾಯ ಮಾಡಿದ ಆರೋಪದಲ್ಲಿ ಛಲವಾದಿಪಾಳ್ಯದ ಡಿಸೋಜಾ ಹಾಗೂ ರಾಜೇಶ್ ಎಂಬಿಬ್ಬರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಡಾ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಆರೋಪಿ ಡಿಸೋಜಾ, ಕೊಲೆಗೈದ ಪೀಟರ್, ಸೂರ್ಯನನ್ನು ತನ್ನ ಆಟೋದಲ್ಲಿ ಕರೆದೊಯ್ದು, ನಗರದ ವಿವಿಧೆಡೆ ಸುತ್ತಾಡಿಸಿ ಕೊನೆಗೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಬಜಾಜ್ ಮೈದಾನದಲ್ಲಿ ಬಿಟ್ಟು ಹೋಗಿದ್ದ. ಕೃತ್ಯ ಎಸಗಿದ ಬಳಿಕ ಪೀಟರ್, ರಾಜೇಶ್‌ಗೆ ಕರೆ ಮಾಡಿ ಸಂಪರ್ಕಿಸಿ ನೆರವು ಕೋರಿದ್ದು ಆತ ಕೂಡ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದ ಎಂದು ಅವರು ತಿಳಿಸಿದ್ದಾರೆ.
ಹತ್ಯೆಗೂ ಮೊದಲು ಪ್ರಮುಖ ಆರೋಪಿ ಮಾಲಾ ತನ್ನ ಮನೆಯಲ್ಲಿ ಪೀಟರ್, ಸೂರ್ಯ ಹಾಗೂ ಇತರೆ ಆರೋಪಿಗಳನ್ನು ಕರೆಸಿಕೊಂಡು ಸಭೆ ನಡೆಸಿದ್ದಳು. ಹಣದ ಬಗ್ಗೆ ಚಿಂತೆ ಬೇಡ, ಸಾಲ ಮಾಡಿಯಾದರೂ ಹಣ ಕೊಡುತ್ತೇನೆ. ಕೆಲಸ ಮುಗಿಸುವಂತೆ ಸೂಚಿಸಿದ್ದಳು ಎನ್ನಲಾಗಿದೆ.
ಅನಂತರ ಆಕೆಯ ಪುತ್ರ ಅರುಳ್, ಎಲ್ಲ ಆರೋಪಿಗಳ ಜತೆ ಮೂರು ಬಾರಿ ಪಾರ್ಟಿ ಮಾಡಿ, ಯಾರು ಯಾವ ಕೆಲಸ ಮಾಡಬೇಕು, ಹೇಗೆ ತಪ್ಪಿಸಿಕೊಳ್ಳಬೇಕು ಎಂದು ವಿವರಿಸಿದ್ದ ಎನ್ನಲಾಗಿದೆ.