ಹಾವೇರಿ: ಎತ್ತುಗಳ ಮೈತೊಳೆಯಲು ಕೆರೆಗೆ ಹೋಗಿದ್ದ ಹದಿನಾಲ್ಕು ವರ್ಷದ ಬಾಲಕರಿಬ್ಬರು ನೀರುಪಾಲಾಗಿರುವ ದಾರುಣ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ದೂದಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬಸನಗೌಡ ಹಂಡೋರಿ ಎಂಬುವರ ಪುತ್ರ ಹದಿನಾಲ್ಕು ವರ್ಷದ ಅಭಿಷೇಕ್ ಹಂಡೋರಿ ಮತ್ತು ಅವರ ಸಂಬಂಧಿ ಹದಿನಾಲ್ಕು ವರ್ಷದ ಹರೀಶ್ ಬಾಳಿಕಾಯಿ ನಿನ್ನೆ ಮಧ್ಯಾಹ್ನ ಎತ್ತುಗಳ ಮೈತೊಳೆಯಲು ಮಾಸೂರು ರಸ್ತೆಯಲ್ಲಿರುವ ಬಂದಮ್ಮನ ಕೆರೆಗೆ ಹೋಗಿದ್ದರು. ಆಗ ಆಕಸ್ಮಿಕವಾಗಿ ಇಬ್ಬರು ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಕೆರೆ ಆಳ ಇದ್ದಿದ್ದರಿಂದ ಈಜು ಬಾರದೆ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳೀಯರ ನೆರವಿನಿಂದ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ.
ಬಾಲಕರ ಮೃತದೇಹಗಳನ್ನು ಕಂಡ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸದ್ಯ ಈ ಪ್ರಕರಣ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.