ಇಸ್ಲಾಮ್ ಗೆ ಮತಾಂತರಗೊಂಡ ಯುವತಿಗೆ ರಕ್ಷಣೆ ನೀಡುವಂತೆ ದೆಹಲಿ ಹೈಕೋರ್ಟ್ ಆದೇಶ

Prasthutha|

ಇಸ್ಲಾಂಗೆ ಮತಾಂತರಗೊಂಡಿದ್ದಕ್ಕಾಗಿ ಉತ್ತರ ಪ್ರದೇಶ ಪೊಲೀಸರು, ಕೆಲವು ಮಾಧ್ಯಮ ಸಂಸ್ಥೆಗಳು ಮತ್ತು ಕೆಲವು ಮೂಲಭೂತವಾದಿ ಸಂಘಟನೆಗಳು ಬೆದರಿಕೆ ಮತ್ತು ಕಿರುಕುಳ ನೀಡುತ್ತಿವೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿರುವ 29 ವರ್ಷದ ಯುವತಿಗೆ ರಕ್ಷಣೆ ನೀಡುವಂತೆ ದೆಹಲಿ ಹೈಕೋರ್ಟ್ ಗುರುವಾರ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದೆ.

- Advertisement -


ಜುಲೈ 5 ರಂದು ರೋಸ್ಟರ್ ಬೆಂಚ್ ಮುಂದೆ ಮಹಿಳೆಯ ಪ್ರಕರಣವನ್ನು ನಿಗದಿಪಡಿಸುವಾಗ ರಜಾ ದಿನದ ನ್ಯಾಯಪೀಠದ ನ್ಯಾಯಮೂರ್ತಿ ಸಿ ಹರಿಶಂಕರ್ ಅವರು ಈ ನಿರ್ದೇಶನ ನೀಡಿದರು.
ಈ ಪ್ರಕರಣದ ವಿಚಾರಣೆಯನ್ನು ಸಾಮಾನ್ಯ ನ್ಯಾಯಪೀಠವು ಕೈಗೆತ್ತಿಕೊಳ್ಳುವವರೆಗೂ ಮಹಿಳೆಯ ಜೀವ ಮತ್ತು ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಿದರು.
ಈ ಅರ್ಜಿಯಲ್ಲಿನ ಆರೋಪಗಳ ಸ್ವರೂಪವನ್ನು ಗಮನಿಸಿದಾಗ ಈ ಪ್ರಕರಣ ರೋಸ್ಟರ್ ಪ್ರಕಾರ ನಿಯಮಿತ ನ್ಯಾಯಪೀಠದ ಮುಂದೆ ವಿಚಾರಣೆಗೆ ಬರುವುದು ಸೂಕ್ತ. ಈ ರಜಾಕಾಲದ ನ್ಯಾಯಪೀಠವು ಈ ರೀತಿಯ ಅರ್ಜಿಗಳ ಬಗ್ಗೆ ವಿಚಾರಣೆ ನಡೆಸುವುದು ಸರಿಯಲ್ಲ ಎಂದು ನ್ಯಾಯಪೀಠ ಹೇಳಿದೆ.


ಮಹಿಳೆ ಮೇ 27 ರಂದು “ನನ್ನ ಸ್ವಂತ ಇಚ್ಛೆಯಿಂದ ಇಸ್ಲಾಮ್ ಗೆ ಮತಾಂತರಗೊಂಡಿದ್ದೇನೆ. ಇದಕ್ಕೆ ಯಾವುದೇ ಬಲವಂತ ಅಥವಾ ಬೆದರಿಕೆ ಇಲ್ಲ. ಆದರೂ ಜೂನ್ 23 ರಿಂದ ಅಪರಿಚಿತ ವ್ಯಕ್ತಿಗಳು ದೂರವಾಣಿ ಮೂಲಕ ಬೆದರಿಕೆ ಹಾಕುತ್ತಿದ್ದಾರೆ. ಓರ್ವ ವ್ಯಕ್ತಿ 20,000 ರೂ. ಹಣವನ್ನು ಬಲವಂತವಾಗಿ ತೆಗೆದುಕೊಂಡಿದ್ದಾನೆ ಎಂದು ಅರ್ಜಿಯಲ್ಲಿ ಆರೋಪಿದ್ದಾರೆ.
“ಅರ್ಜಿದಾರರ ಮತಾಂತರಕ್ಕೆ ಸಂಬಂಧಿಸಿದಂತೆ ಯುಪಿ ಯ ಕೆಲವು ಸುದ್ದಿ ಮಾಧ್ಯಮಗಳು ಮತ್ತು ನ್ಯೂಸ್ ಪೋರ್ಟಲ್‌ಗಳಲ್ಲಿ ಸುಳ್ಳು ಹಾಗೂ ಸಂಪೂರ್ಣವಾಗಿ ಅಸಂಬದ್ಧ ಮತ್ತು ಕಾಲ್ಪನಿಕ ವಿವರಗಳನ್ನು ನೀಡಲಾಗುತ್ತಿವೆ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಒಪಿಇಂಡಿಯಾ ಎಂಬ ಪೋರ್ಟಲ್ ಪ್ರಕಟಿಸಿದ ಸುದ್ದಿಯ ವಿಷಯವನ್ನು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.
ಜೂನ್ 24 ರಂದು ದೆಹಲಿ ಪೊಲೀಸರಿಗೆ ದೂರು ನೀಡಲಾಗಿದ್ದರೂ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.
ತನ್ನ ತಂದೆಯನ್ನು “ಉತ್ತರ ಪ್ರದೇಶ ಪೊಲೀಸ್ ಅಧಿಕಾರಿಗಳು ದೆಹಲಿಗೆ ಬರದಂತೆ ತಡೆಯುತ್ತಿದ್ದಾರೆ. ಉತ್ತರ ಪ್ರದೇಶ ಪೊಲೀಸರು ತನ್ನ ವಿರುದ್ಧ ಸುಳ್ಳು ಎಫ್ಐಆರ್ ದಾಖಲಿಸಿದ್ದಾರೆ” ಎಂದು ಮಹಿಳೆ ಆರೋಪಿಸಿದ್ದಾರೆ.

- Advertisement -



Join Whatsapp