ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಕಳೆದ ಏಳು ತಿಂಗಳುಗಳಿಂದ ದೆಹಲಿ ಗಡಿ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಇಂದು ಬಿಜೆಪಿ ಕಾರ್ಯಕರ್ತರು ಘರ್ಷಣೆಗಿಳಿದ ಘಟನೆ ಗಾಝಿಪುರ ಗಡಿಯಲ್ಲಿ ನಡೆದಿದೆ.
ಉತ್ತರ ಪ್ರದೇಶ-ದೆಹಲಿ ಗಡಿ ಪ್ರದೇಶವಾದ ಗಾಝಿಪುರದಲ್ಲಿ ರೈತರು ಕಳೆದ ಏಳು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ರೈತರನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಬಳಿಕ ಬಿಜೆಪಿ ಕಾರ್ಯಕರ್ತರು ಸ್ಥಳೀಯ ಪೊಲೀಸ್ ವರಿಷ್ಠರ ಕಚೇರಿ ಮುಂದೆ ಪ್ರತಿಭಟನೆಯನ್ನೂ ನಡೆಸಿದರು.
ತಮ್ಮ ಪಕ್ಷದ ನಾಯಕ ಅಮಿತ್ ಪ್ರಧಾನ್ ಅವರನ್ನು ಭೇಟಿಯಾಗಲೆಂದು ಬಿಜೆಪಿ ಕಾರ್ಯಕರ್ತರು ನೆರೆದಿದ್ದರು. ಅಮಿತ್ ಪ್ರಧಾನ್ ಅದೇ ಮಾರ್ಗವಾಗಿ ಬುಲಂದ್ ಶಹರ್ ಗೆ ಪ್ರಯಾಣಿಸುವವರಿದ್ದರು.
ತಾವು ಪ್ರತಿಭಟನೆ ನಡೆಸುತ್ತಿರುವ ಪ್ರದೇಶದಲ್ಲಿ ಬಿಜೆಪಿ ಧ್ವಜ ಹಿಡಿದು ಕಾರ್ಯಕರ್ತರು ನಿಂತಿರುವುದಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದರು. ಅವರು ಬಿಜೆಪಿ ಕಾರ್ಯಕರ್ತರತ್ತ ಕಪ್ಪು ಧ್ವಜ ಪ್ರದರ್ಶಿಸಿದರು. ಇದು ವಾಗ್ವಾದಕ್ಕೆ ತಿರುಗಿ, ಬಳಿಕ ಹಿಂಸಾಚಾರಕ್ಕೆ ಕಾರಣವಾಯಿತು, ಕಲ್ಲೆಸೆತ ನಡೆದಿದೆ ಎನ್ನಲಾಗಿದೆ.