ಉಡುಪಿ: ವಕ್ಫ್ ಬೋರ್ಡ್ ನಲ್ಲಿ ನೋಂದಣಿಗೊಂಡಿರುವ, ಗೆಜೆಟ್ ಅಧಿಸೂಚನೆ ಪಡೆದಿದ್ದ ಕಲ್ಮತ್ ಮಸೀದಿ ಜಾಗವನ್ನು ಕಾನೂನುಬಾಹಿರವಾಗಿ ರದ್ದುಗೊಳಿಸಿ ವಾಪಾಸು ಪಡೆದ ಬಿಜೆಪಿ ಸರ್ಕಾರದ ನಡೆಯನ್ನು ಖಂಡಿಸಿ ಹಾಗೂ ಜಾಗವನ್ನು ಮಸೀದಿಯ ಹೆಸರಿನಲ್ಲಿ ಮರು ನೋಂದಣಿ ಮಾಡಬೇಕು ಎಂದು ಒತ್ತಾಯಿಸಿ ಜಸ್ಟೀಸ್ ಫಾರ್ ಕಲ್ಮತ್ ಮಸ್ಜಿದ್ ವೇದಿಕೆ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ವೇದಿಕೆಯ ಮುಖಂಡ ಹಾಗೂ ಎಸ್ ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ಇಲ್ಯಾಸ್ ಸಸ್ತಾನ ಮಾತನಾಡಿ, ಕಲ್ಮತ್ ಮಸೀದಿಗೆ ಆಗಿರುವ ಅನ್ಯಾಯದ ವಿರುದ್ಧ ಹೋರಾಟ ನಡೆಸಲು ಜಸ್ಟೀಸ್ ಫಾರ್ ಕಲ್ಮತ್ ಮಸ್ಜಿದ್ ಎಂಬ ವೇದಿಕೆಯನ್ನು ರಚಿಸಲಾಗಿದೆ. ಕಾನೂನು ಪರ ಎಲ್ಲಾ ದಾಖಲೆಗಳು ಮಸೀದಿ ಪರವಾಗಿದ್ದರೂ ಇಲ್ಲಿನ ಬಿಜೆಪಿ ಶಾಸಕ ರಘುಪತಿ ಭಟ್ ಮತ್ತು ಕಂದಾಯ ಸಚಿವರ ಕುಮ್ಮಕ್ಕಿನಿಂದಾಗಿ ಮಸೀದಿಯ ಜಾಗವನ್ನು ಹಿಂದಕ್ಕೆ ಪಡೆಯಲಾಗಿದೆ. ಈ ಅನ್ಯಾಯದ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು.
ಜಿಲ್ಲಾಧಿಕಾರಿಯವರು ಕಾನೂನು ಉಲ್ಲಂಘಿಸಿ ಜಿಲ್ಲೆಯ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮತ್ತೋರ್ವ ಮುಖಂಡ ನಝೀರ್ ಅಹ್ಮದ್ ಮಾತನಾಡಿ, ಸುಮಾರು 70 ವರ್ಷಗಳಿಂದ ಈ ಮಸೀದಿಗೆ ತಸ್ತೀಕ್ ಬರುತ್ತಿತ್ತು. ಆದರೆ ರಾಜಕೀಯ ಕಾರಣಕ್ಕಾಗಿ, ಒಂದು ಸಮುದಾಯದ ಓಲೈಕೆಗಾಗಿ ಆರ್ ಟಿಸಿ ರದ್ದುಗೊಳಿಸಿದ್ದಾರೆ. ಇದು ಘೋರ ಅನ್ಯಾಯ. ಇದರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಬಳಿಕ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.