ಕೇಂದ್ರ ಸಚಿವ ರವಿಶಂಕರ್‌ ಟ್ವಿಟರ್‌ ಖಾತೆಯೇ ಬ್ಲಾಕ್‌ | ಕಾನೂನು ನೆಪದಲ್ಲೇ ಕಾಲೆಳೆಯಿತಾ ಟ್ವಿಟರ್?‌

Prasthutha|

ನವದೆಹಲಿ : ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೋಶಿಯಲ್‌ ಮೀಡಿಯಾ ವೇದಿಕೆಗಳು ಹೊಸ ಐಟಿ ನಿಯಮ ಪಾಲಿಸಬೇಕೆಂದು ಕೇಂದ್ರ ಸರಕಾರ ಒತ್ತಡ ಹೇರಿರುವ ನಡುವೆ, ಕೇಂದ್ರ ಹಾಗೂ ಟ್ವಿಟರ್‌ ನಡುವಿನ ಸಂಘರ್ಷ ಇನ್ನೊಂದು ಹಂತಕ್ಕೆ ತಲುಪಿರುವಂತೆ ಇಂದು ಕಂಡುಬಂದಿದೆ. ಕಾನೂನು ನಿಯಮವನ್ನೇ ಉಲ್ಲೇಖಿಸಿ ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್ ಟ್ವಿಟರ್‌ ಖಾತೆಯನ್ನೇ ಒಂದು ಗಂಟೆ ಬ್ಲಾಕ್‌ ಮಾಡಿದ ಘಟನೆ ನಡೆದಿದೆ.

- Advertisement -

ಈ ಬಗ್ಗೆ ಸ್ವತಃ ಸಚಿವರೇ ಹೇಳಿಕೊಂಡಿದ್ದಾರೆ.‌ ಗೆಳೆಯರೇ, ಇಂದು ತುಂಬಾ ವಿಚಿತ್ರವಾದ ವಿಷಯವೊಂದು ನಡೆಯಿತು. ಟ್ವಿಟರ್‌ ಸಂಸ್ಥೆ ಇಂದು ನನ್ನ ಖಾತೆ ನಿರ್ವಹಿಸುವ ಅವಕಾಶವನ್ನು ಸುಮಾರು ಒಂದು ಗಂಟೆ ತಡೆ ಹಿಡಿದಿತ್ತು. ಡಿಜಿಟಲ್‌ ಮಿಲೇನಿಯಂ ಕಾಪಿರೈಟ್‌ ಆಕ್ಟ್‌ ಆಫ್‌ ಯುಎಸ್‌ ಯನ್ನು ಉಲ್ಲಂಘಿಸಿದ್ದಕ್ಕೆ ಹೀಗೆ ಮಾಡಲಾಗಿದೆ ಎಂದು ಟ್ವಿಟರ್‌ ತಿಳಿಸಿದುದಾಗಿ ಸಚಿವರು ಹೇಳಿದ್ದಾರೆ.

ಟ್ವಿಟರ್‌ ನವರ ಈ ವರ್ತನೆ ನೋಡಿದರೆ ಅವರು ಹೇಳಿಕೊಂಡ ರೀತಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತಿಲ್ಲ. ಅವರಿಗೆ ಅವರದೇ ಆದ ಒಂದು ಅಜೆಂಡಾ ಇದೆ. ಅದಕ್ಕೆ ಪೂರಕವಾಗಿ ನಡೆದುಕೊಳ್ಳದಿದ್ದರೆ ಅವರು ನಿರ್ದಾಕ್ಷಿಣ್ಯವಾಗಿ ನಿಮ್ಮನ್ನು ಅವರ ವೇದಿಕೆಯಿಂದ ತೆಗೆದುಬಿಡುತ್ತಾರೆ ಎಂದು ರವಿಶಂಕರ್‌ ಪ್ರಸಾದ್‌ ಹೇಳಿಕೊಂಡಿದ್ದಾರೆ.

- Advertisement -

ಹೊಸ ಐಟಿ ನಿಯಮಗಳನ್ನು ಪಾಲಿಸಬೇಕೆಂದು ಕೇಂದ್ರ ಸರಕಾರ ಸೋಶಿಯಲ್‌ ಮೀಡಿಯಾ ಸಂಸ್ಥೆಗಳಿಗೆ ನಿರ್ದೇಶಿಸಿದೆ. ಆದರೆ, ಸರಕಾರದ ನಿರ್ದೇಶನ ಪಾಲಿಸಲು ಸೋಶಿಯಲ್‌ ಮೀಡಿಯಾ ಸಂಸ್ಥೆಗಳು ಹಿಂದೇಟು ಹಾಕುತ್ತಲೇ ಇವೆ. ಈ ಸಂಬಂಧ ಈಗಾಗಲೇ ಸರಕಾರ ಮತ್ತು ಟ್ವಿಟರ್‌ ನಡುವೆ ಸಂಘರ್ಷ ನಡೆಯುತ್ತಿದೆ. ವಿವಿಧ ಘಟನೆಗಳಿಗೆ ಸಂಬಂಧಿಸಿ ಟ್ವಿಟರ್‌ ವಿರುದ್ಧವೂ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಕಾನೂನು ಉಲ್ಲಂಘನೆಯ ನೆಪದಲ್ಲಿ ರವಿಶಂಕರ್‌ ಪ್ರಸಾದ್‌ ಅವರ ಖಾತೆಯನ್ನೇ ಒಂದು ಗಂಟೆ ಬ್ಲಾಕ್‌ ಮಾಡಿ, ಟ್ವಿಟರ್‌ ಸಚಿವರ ಕಾಲೆಳೆಯಿತೇ? ಎಂಬ ಚರ್ಚೆಗಳು ಆರಂಭವಾಗಿದೆ.      



Join Whatsapp