ಮಂಗಳೂರು: ಸ್ತುತಿ ಪ್ರಕಾಶನ ಸಂಸ್ಥೆಯ ನೂತನ ಮಳಿಗೆಯು ಮಂಗಳೂರಿನ ನೆಲ್ಲಿಕಾಯಿ ರಸ್ತೆಯ ವೆಸ್ಟ್ ಕೋಸ್ಟ್ ಕಾಂಪ್ಲೆಕ್ಸ್ ನಲ್ಲಿ ಶುಕ್ರವಾರ ಶುಭಾರಂಭಗೊಂಡಿತು.
ಮಳಿಗೆ ಉದ್ಘಾಟಿಸಿ ಮಾತನಾಡಿದ ಪ್ರಸ್ತುತ ಪಾಕ್ಷಿಕದ ಪ್ರಧಾನ ಸಂಪಾದಕ ಅಬ್ದುಲ್ ರಝಾಕ್ ಕೆಮ್ಮಾರ, ಕಳೆದ 16 ವರ್ಷಗಳಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಹಲವು ಅಪೂರ್ವ ಕೃತಿಗಳನ್ನು ಅರ್ಪಿಸಿದ ಸ್ತುತಿ ಪ್ರಕಾಶನ ಸಂಸ್ಥೆಯು ಯುವ ಜನಾಂಗದಲ್ಲಿ ಓದುವ ಹವ್ಯಾಸ ಉಂಟು ಮಾಡಿದೆ. ಇದೀಗ ನಗರದ ಹೃದಯ ಭಾಗದಲ್ಲಿ ನೂತನ ಮಳಿಗೆ ಆರಂಭಗೊಂಡಿರುವುದರಿಂದ ಪುಸ್ತಕ ಪ್ರೇಮಿಗಳ ಬಹುದಿನದ ಕನಸೊಂದು ಈಡೇರಿದಂತಾಗಿದೆ ಎಂದು ಹೇಳಿದರು.
ಸ್ತುತಿ ಪಬ್ಲಿಕೇಷನ್ಸ್ ಆ್ಯಂಡ್ ಇನ್ಫರ್ಮೇಷನ್ ಟ್ರಸ್ಟ್ ಸದಸ್ಯ ಮುಹಮ್ಮದ್ ವಳವೂರು ಮಾತನಾಡಿ, ಜ್ಞಾನ ಸಂಪಾದನೆಗೆ ಓದು ಅಗತ್ಯ. ಜಗತ್ತಿನ ಸಾಧಕರೆಲ್ಲರೂ ಓದಿನ ಮೂಲಕವೇ ಸಾಧನೆ ಮಾಡಿದವರಾಗಿದ್ದಾರೆ. ಓದುವ ಪ್ರವೃತ್ತಿ ಕಡಿಮೆಯಾಗುತ್ತಿರುವ ಇಂದಿನ ಸಮಾಜದಲ್ಲಿ ಇಂತಹ ಪ್ರಕಾಶನ ಸಂಸ್ಥೆಗಳು ಸ್ಪೂರ್ತಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಪ್ರಸ್ತುತ ಪಾಕ್ಷಿಕದ ಸಂಪಾದಕ ಅಬ್ದುಲ್ ಹಮೀದ್ ಎಸ್.ಕೆ., ಮಳಿಗೆಯ ವ್ಯವಸ್ಥಾಪಕ ಮುಹಮ್ಮದ್ ನವಾಝ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಸ್ತುತ ಪಾಕ್ಷಿಕ ಸಂಪಾದಕೀಯ ಮಂಡಳಿ ಸದಸ್ಯ ಝಿಯಾವುಲ್ ಹಖ್ ಕಾರ್ಯಕ್ರಮ ನಿರೂಪಿಸಿದರು.