ಬೆಂಗಳೂರು: ದೇಶದಲ್ಲಿಯೇ ಅತಿ ಹೆಚ್ಚು ಆನೆಗಳನ್ನು ಒಳಗೊಂಡಿರುವ ಬಂಡೀಪುರ ವನ್ಯ ಜೀವಿಧಾಮದಲ್ಲಿರುವ ಸಾಕಾನೆಗಳಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ದೇಶದಲ್ಲಿಯೇ ಮೊದಲ ಬಾರಿಗೆ ವಿನೂತನ ಹಾಗೂ ವಿಭಿನ್ನ ಪ್ರಯೋಗಕ್ಕೆ ಮುಂದಾಗಿದ್ದು, ಬಂಡಿಪುರದಲ್ಲಿರುವ 28 ಸಾಕಾನೆಗಳ ಗಂಟಲು ದ್ರವ ಹಾಗೂ ಮಲವನ್ನು ಸಂಗ್ರಹಿಸಿ ಸಂಬಂಧಪಟ್ಟ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಅಗತ್ಯ ತಪಾಸಣೆಗಳ ಬಳಿಕ ಸೋಂಕು ದೃಢಪಟ್ಟಿಲ್ಲ. ಇದು ಆನೆ ಪ್ರಿಯರಲ್ಲಿ ಸಂತಸವನ್ನುಂಟು ಮಾಡಿದೆ.
ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರದ ಪಶು ವೈದ್ಯಾಧಿಕಾರಿ ರಾಜೇಶ್ ಕುಮಾರ್, ವನ್ಯಜೀವಿಗಳಿಗೆ ಕೊರೋನಾ ಸೋಂಕು ಹರಡಬಾರದು ಎಂಬ ಉದ್ದೇಶದಿಂದ ಆನೆಗಳಿಗೆ ತಪಾಸಣೆ ನಡೆಸಲಾಗಿದೆ. ಇದು ದೇಶದಲ್ಲಿಯೇ ವಿಭಿನ್ನ ಹಾಗೂ ವಿನೂತನ ಪ್ರಯೋಗವಾಗಿದ್ದು, ವನ್ಯ ಜೀವಿ ಹಾಗೂ ಪ್ರಾಣಿ ಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದರು.