ಐದು ವರ್ಷಗಳಿಂದ ಅತ್ಯಾಚಾರಗೈಯುತ್ತಿದ್ದ ಎಂದ ಡ್ರೈವರ್ ಪತ್ನಿ!
ಲಖ್ನೊ: ಕೆಲವು ಕುರ್‌ಆನ್ ಸೂಕ್ತಗಳನ್ನು ಬದಲಿಸಬೇಕೆಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಶಿಯಾ ಸೆಂಟ್ರಲ್ ಆಫ್ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಸಯ್ಯಿದ್ ವಾಸಿಮ್ ರಿಝ್ವಿ ವಿರುದ್ಧ ಮತ್ತೆ ಅತ್ಯಾಚಾರ ಪ್ರಕರಣ ದಾಖಲಾಗಿದೆ. ರಿಝ್ವಿ ತನ್ನ ಚಾಲಕನ ಪತ್ನಿಯ ಮೇಲೆ ಅತ್ಯಾಚಾರ ನಡೆಸಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಕುರಿತು ಮಹಿಳೆ ತನ್ನ ಪತಿಯೊಂದಿಗೆ ಸಾದತ್ ಗಂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಘಟನೆಯ ಬಗ್ಗೆ ತನಿಖೆ ಪ್ರಾರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಯುವತಿಯ ಪತಿ ವರ್ಷಗಳಿಂದ ರಿಝ್ವಿಯ ಚಾಲಕನಾಗಿದ್ದ. ರಿಝ್ವಿ ತನ್ನನ್ನು ಐದು ವರ್ಷಗಳಿಂದ ಅತ್ಯಾಚಾರ ನಡೆಸುತ್ತಿದ್ದು, ಈ ಬಗ್ಗೆ ಹೊರಗಡೆ ತಿಳಿಸಿದರೆ ಯುವತಿಯ ಖಾಸಗಿ ದೃಶ್ಯಾವಳಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿದ್ದಾಳೆ. ಯುವತಿ ಪತಿಗೆ ವಿಷಯವೆನ್ನೆಲ್ಲಾ ತಿಳಿಸಿದಾಗ ಈ ಬಗ್ಗೆ ಕೇಳಲು ರಿಝ್ವಿ ನಿವಾಸಕ್ಕೆ ಹೋದ ಪತಿಯ ಮೇಲೆ ಹಲ್ಲೆ ನಡೆಸಿ ಮೊಬೈಲ್ ಫೋನ್ ಮತ್ತು ಚಾಲನಾ ಪರವಾನಗಿಯನ್ನು ವಶಪಡಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತನ್ನ ಪತ್ನಿಯನ್ನು ಥಳಿಸಿ, ಅತ್ಯಾಚಾರ ಮಾಡಿ ಅಪಹರಿಸಿದ್ದಾನೆ ಎಂದು ಮೇರಾ ಹಕ್ ಫೌಂಡೇಶನ್ ಅಧ್ಯಕ್ಷ ಫರ್ಹಾತ್ ನಖ್ವಿ ಜೂನ್ 18, 2020 ರಂದು ರಿಝ್ವಿ ವಿರುದ್ಧ ದೂರು ದಾಖಲಿಸಿದ್ದರು. ಏಪ್ರಿಲ್ 2, 2021 ರಂದು ಶಹಜಹಾನ್ ಪುರ ಪೊಲೀಸ್ ಠಾಣೆಯಲ್ಲಿ ರಿಝ್ವಿ ವಿರುದ್ಧ FIR ದಾಖಲಾಗಿತ್ತು.