ನವದೆಹಲಿ : ಟಿಎಂಸಿ, ಎಡಪಕ್ಷಗಳು ಮತ್ತು ಎಎಪಿ ಸೇರಿದಂತೆ ಎಂಟು ಪಕ್ಷಗಳ ಪ್ರಮುಖರು ಎನ್ ಸಿಪಿ ಮುಖಂಡ ಶರದ್ ಪವಾರ್ ನಿವಾಸದಲ್ಲಿ ಸಭೆ ಸೇರಿದ್ದಾರೆ. ತೃತೀಯ ಮೈತ್ರಿಕೂಟ ರಚನೆ ಸಂಬಂಧ ಈ ಪಕ್ಷಗಳ ಪ್ರತಿನಿಧಿಗಳು ಸಭೆ ಸೇರಿರಬಹುದು ಎಂದು ಅಂದಾಜಿಸಲಾಗಿದೆ.
ರಾಷ್ಟ್ರಮಂಚ್ ನ ಮಾಜಿ ಸಚಿವ ಯಶವಂತ ಸಿನ್ಹಾ ಈ ಸಭೆಯನ್ನು ಆಯೋಜಿಸಿದ್ದಾರೆ ಎನ್ನಲಾಗಿದೆ. ಶರದ್ ಪವಾರ್ ನಿವಾಸದಲ್ಲಿ ಸಭೆ ನಡೆಸುವಂತೆ ಅವರನ್ನು ಸಿನ್ಹಾ ಕೋರಿದ್ದರು. ಪ್ರಸ್ತುತ ಸನ್ನಿವೇಶಗಳ ಬಗ್ಗೆ ಚರ್ಚೆ ನಡೆಸಲು ಸಭೆ ಕರೆಯಲಾಗಿದೆ ಎಂದು ಹೇಳಲಾಗಿದೆ.
ಸಭೆಯಲ್ಲಿ ಎಂಟು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ. ನ್ಯಾಶನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ, ಪವಾರ್ ರ ಎನ್ ಸಿಪಿಯ ಮಜೀದ್ ಮೆಮೊನ್ ಮತ್ತು ವಂದನಾ ಚೌಹಾಣ್, ಆರ್ ಜೆಡಿಯ ಜಯಂತ್ ಚೌಧರಿ, ಸಮಾಜವಾದಿ ಪಕ್ಷದ ಗ್ಯಾನ್ ಶ್ಯಾಮ್ ತಿವಾರಿ, ಎಎಪಿಯ ಸುಶೀಲ್ ಗುಪ್ತಾ ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಎ.ಪಿ. ಶಾ, ಮಾಜಿ ರಾಯಭಾರಿ ಕೆ.ಸಿ. ಸಿಂಗ್ ಮತ್ತು ಸಾಹಿತಿ ಜಾವೇದ್ ಅಖ್ತಾರ್ ಸಭೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ರಾಜಕಾರಣಿ ಪವಾರ್ ಅವರ ನೇತೃತ್ವದಲ್ಲಿ ಈ ಸಭೆ ನಡೆದಿದೆ ಎಂದರೆ, ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಮಿತ್ರಕೂಟ ರಚಿಸುವ ಪ್ರಾಥಮಿಕ ಹಂತದ ಸಿದ್ಧತೆ ಎಂದು ಹಲವರು ಬಣ್ಣಿಸಿದ್ದಾರೆ. ಆದರೆ, ಆ ರೀತಿ ಏನೂ ಇಲ್ಲ ಎಂದು ಕಾರ್ಯಕ್ರಮದ ಕುರಿತು ನಂಟು ಹೊಂದಿರುವವರು ಸ್ಪಷ್ಟಪಡಿಸಿದ್ದಾರೆ.