ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್ (ನೈಸ್) ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಆಧಾರ ರಹಿತ ಆರೋಪ ಮಾಡಿದ್ದಾರೆ ಎಂದು ಸಂಸ್ಥೆ ಹೂಡಿದ್ದ ಮಾನನಷ್ಟ ಪ್ರಕರಣದಲ್ಲಿ ದೇವೇಗೌಡರಿಗೆ ಹಿನ್ನಡೆಯಾಗಿದ್ದು. ದೇವೇಗೌಡರು ತಾವು ಮಾಡಿದ್ದ ಆರೋಪವನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಮಾಜಿ ಪ್ರಧಾನಿಗೆ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯವು 2 ಕೋಟಿ ರೂಪಾಯಿ ದಂಡ ವಿಧಿಸಿದೆ.
ದೇವೇಗೌಡರು 2011ರಲ್ಲಿ ಖಾಸಗಿ ಸುದ್ದಿ ಮಾಧ್ಯಮಕ್ಕೆ ನೀಡಿದ್ದ ಸಂದರ್ಶನದಲ್ಲಿ ನೈಸ್ ಸಂಸ್ಥೆಯ ವಿರುದ್ದ ಆರೋಪ ಮಾಡಿದ್ದರು. ನೈಸ್ ಸಂಸ್ಥೆಯು ನೈಸ್ ಕಾರಿಡಾರ್ ಯೋಜನೆಯ ಲೋಪಗಳನ್ನು ಬಳಸಿಕೊಂಡು ಅಗತ್ಯಕ್ಕಿಂತ ಹೆಚ್ಚು ಭೂಮಿ ವಶಪಡಿಸಿಕೊಂಡಿದ್ದು ರೈತರಿಗೆ ಅನ್ಯಾಯವಾಗಿದೆ ಎಂದು ಹೇಳಿದ್ದರು.
ಮಾಜಿ ಪ್ರಧಾನಿಯವರ ಹೇಳಿಕೆಯನ್ನು ಆಧರಿಸಿ ದೇವೇಗೌಡರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದ ನೈಸ್ ಸಂಸ್ಥೆ, ”ದೇವೇಗೌಡರ ಹೇಳಿಕೆಯಿಂದ ಸಂಸ್ಥೆಯ ಘನತೆಗೆ ಚ್ಯುತಿಯುಂಟಾಗಿದೆ, ಅದಕ್ಕಾಗಿ ರೂ. 10 ಕೋಟಿ ಪರಿಹಾರ ಕೊಡಿಸಬೇಕು” ಎಂದು ಕೇಳಿತ್ತು.
ಮೊಕದ್ದಮೆಯ ವಿಚಾರಣೆ ನಡೆಸಿರುವ ನ್ಯಾಯಾಲಯವು, “ದೇವೇಗೌಡರು ತಾವು ಮಾಡಿದ್ದ ಆರೋಪಗಳನ್ನು ಸಮರ್ಥಿಸಿಕೊಳ್ಳಲು ಅಗತ್ಯವಾದ ಯಾವುದೇ ರೀತಿಯ ದಾಖಲೆಗಳನ್ನು ನೀಡಿಲ್ಲ” ಎಂದು ಹೇಳಿದ್ದು, 2 ಕೋಟಿ ರೂಪಾಯಿ ದಂಡ ವಿಧಿಸಿದೆ. ಅಲ್ಲದೆ, ಇನ್ನು ಮುಂದೆ ನೈಸ್ ಸಂಸ್ಥೆಯ ವಿರುದ್ದ ಆರೋಪ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲನಗೌಡ ತೀರ್ಪು ನೀಡಿದ್ದಾರೆ.