ಮುಸ್ಲಿಂ ವೃದ್ಧನ ಥಳಿತ ಪ್ರಕರಣ | ವೀಡಿಯೊ ಪೋಸ್ಟ್‌ ಮಾಡಿದ್ದಕ್ಕೆ ಎಸ್ಪಿ ಮುಖಂಡ ಉಮ್ಮೀದ್‌ ಪೆಹಲ್ವಾನ್‌ ದೆಹಲಿಯಲ್ಲಿ ಬಂಧನ

Prasthutha|

ನವದೆಹಲಿ : ಉತ್ತರ ಪ್ರದೇಶದ ಲೋನಿಯಲ್ಲಿ ನಡೆದ ಮುಸ್ಲಿಂ ವೃದ್ಧನ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದ ಆರೋಪದಲ್ಲಿ ಸಮಾಜವಾದಿ ಪಕ್ಷದ ನಾಯಕ ಉಮ್ಮೀದ್‌ ಪೆಹಲ್ವಾನ್‌ ಇದ್ರಿಸಿ ಅವರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ.

- Advertisement -

ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿಯೊಂದಿಗೆ ಉಮ್ಮೀದ್‌ ಪೆಹಲ್ವಾನ್‌ ರನ್ನು ದೆಹಲಿಯ ಲೋಕ ನಾರಾಯಣ್‌ ಜೈ ಪ್ರಕಾಶ್‌ ಆಸ್ಪತ್ರೆ ಬಳಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲೋನಿ ಘಟನೆಗೆ ಸಂಬಂಧಿಸಿ ಉಮ್ಮೀದ್‌ ಪೆಹಲ್ವಾನ್‌ ರನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆಗೆ ಅವರನ್ನು ಇಲ್ಲಿಗೆ ಕರೆ ತರಲಾಗುವುದು ಎಂದು ಗಾಝಿಯಾಬಾದ್‌ ಎಸ್‌ ಎಸ್‌ ಪಿ ಅಮಿತ್‌ ಪಾಠಕ್‌ ತಿಳಿಸಿದ್ದಾರೆ.

- Advertisement -

ಮುಸ್ಲಿಂ ವೃದ್ಧನಿಗೆ ಥಳಿಸಿದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಈ ಹಲ್ಲೆಯ ವೇಳೆ ಗುಂಪೊಂದು ವೃದ್ಧನಿಗೆ ʼʼಜೈ ಶ್ರೀರಾಮ್” ಕೂಗುವಂತೆ ಒತ್ತಾಯಿಸಿತ್ತು ಎಂಬ ವಿಚಾರದೊಂದಿಗೆ ವೀಡಿಯೊ ಹರಡಿತ್ತು.

ಆದರೆ, ಪ್ರಕರಣದಲ್ಲಿ ಕೋಮು ಬಣ್ಣ ಇರಲಿಲ್ಲ. ತಪ್ಪು ಅಂಶಗಳೊಂದಿಗೆ ವೀಡಿಯೊ ವೈರಲ್‌ ಮಾಡಲಾಗಿದೆ ಎಂದು ಆಪಾದಿಸಿ ಪೊಲೀಸರು ಸುದ್ದಿ ಮಾಡಿದ್ದ ಕೆಲವು ಮಾಧ್ಯಮ ಸಂಸ್ಥೆಗಳು, ಪತ್ರಕರ್ತರು, ಪ್ರಮುಖರ ವಿರುದ್ಧ ದೂರು ದಾಖಲಿಸಿಕೊಂಡಿದ್ದರು.

ಉಮ್ಮೀದ್‌ ಪೆಹಲ್ವಾನ್‌ ವೃದ್ಧ ತನಗಾದ ದೌರ್ಜನ್ಯದ ಬಗ್ಗೆ ಹೇಳುತ್ತಿರುವ ವೀಡಿಯೊವನ್ನು ಅನಗತ್ಯವಾಗಿ ಮಾಡಿದ್ದರು. ಸಾಮಾಜಿಕ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಈ ವೀಡಿಯೊ ಮಾಡಿ, ಫೇಸ್‌ ಬುಕ್‌ ನಲ್ಲಿ ಶೇರ್‌ ಮಾಡಿಕೊಂಡಿದ್ದನು ಎಂದು ಎಫ್‌ ಐಆರ್‌ ನಲ್ಲಿ ಆಪಾದಿಸಲಾಗಿದೆ.



Join Whatsapp