ತೇಲಿಬಂದ ‘ಗಂಗಾ ಪುತ್ರಿ’ ಗೆ ಹೊಸ ಜೀವನ | ರಕ್ಷಕನಿಗೆ ಸೌಲಭ್ಯಗಳ ಮಹಾಪೂರ!

Prasthutha|

ಲಕ್ನೋ: ಗಂಗಾ ನದಿಯಲ್ಲಿ ತೇಲಿಬಂದ 21 ದಿನಗಳ ಹೆಣ್ಣು ಮಗುವನ್ನು ರಕ್ಷಿಸಿದ ಜೀವನೋಪಾಯಕ್ಕಾಗಿ ದೋಣಿಯನ್ನು ಅವಲಂಭಿಸಿದ್ದ ಗುಲ್ಲು ಚೌಧರಿಗೆ ಸ್ವಂತ ಬೋಟ್ ನೀಡುವುದಾಗಿ ಉತ್ತರ ಪ್ರದೇಶ ಸರ್ಕಾರ ಭರವಸೆ ನೀಡಿದ್ದು, ಚೌಧರಿ ಅವರಿಗೆ ಸರ್ಕಾರಿ ಯೋಜನೆಗಳ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು ಎಂದು ತಿಳಿಸಿದೆ.

- Advertisement -

ಅದೇ ವೇಳೆ ಹೆಣ್ಣು ಮಗುವಿನ ಎಲ್ಲಾ ಖರ್ಚುಗಳನ್ನು ಭರಿಸಿ ಸಂರಕ್ಷಿಸುವುದಾಗಿಯೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಗಾಝಿಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ MP ಸಿಂಗ್ ಅವರು ನಿನ್ನೆ ಗುಲ್ಲು ಚೌಧರಿ ಅವರ ಮನೆಗೆ ಭೇಟಿ ನೀಡಿ ವಿಚಾರಿಸಿದಾಗ ಗುಲ್ಲು ಚೌಧರಿಗೆ ಸ್ವಂತ ಮನೆ ಇರುವುದು ತಿಳಿದುಬಂದಿದೆ. ಆದ್ದರಿಂದ ಸರ್ಕಾರಿ ಯೋಜನೆಯಲ್ಲಿ ಮನೆ ಕಟ್ಟಿಸಿಕೊಡುವ ಅಗತ್ಯವಿಲ್ಲ. ಆದರೆ ಗುಲ್ಲು ಚೌಧರಿ ತನ್ನ ಜೀವನಾಧಾರಕ್ಕಾಗಿ ಸ್ನೇಹಿತರ ಬೋಟ್ ಬಳಸುತ್ತಿರುವುದರಿಂದ ಸರ್ಕಾರದಿಂದ ಸ್ವಂತ ಬೋಟ್ ನೀಡುವುದಾಗಿ MP ಸಿಂಗ್ ಭರವಸೆ ನೀಡಿದ್ದಾರೆ.

ಚೌಧರಿ ಮನೆಗೆ ಹೋಗುವ ದಾರಿ ಹದಗೆಟ್ಟಿತ್ತು. ಇದರಿಂದಾಗಿ ಅಧಿಕಾರಿಗಳು ಚೌಧರಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿ ಮನೆಗೆ ಹೋಗುವ ಪ್ರದೇಶಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಿಸಲು ನಿರ್ಧರಿಸಿದ್ದಾರೆ. ಕಳೆದ ವಾರ ಗಂಗಾ ನದಿಯಲ್ಲಿ ತೇಲಿ ಬಂದ ಪೆಟ್ಟಿಗೆಯಲ್ಲಿದ್ದ ಮಗುವನ್ನು ಚೌಧರಿ ರಕ್ಷಿಸಿದ್ದರು. ಮಗುವನ್ನು ಮರದ ಪೆಟ್ಟಿಗೆಯಲ್ಲಿ ಹಿಂದೂ ದೇವತೆಗಳ ಚಿತ್ರಗಳೊಂದಿಗೆ ರೇಷ್ಮೆ ಬಟ್ಟೆಗಳಲ್ಲಿ ಸುತ್ತಿ ಇಡಲಾಗಿತ್ತು. ಪೆಟ್ಟಿಗೆಯ ಒಳಗಿನಿಂದ ಮಗುವಿನ ಅಳು ಕೇಳಿ ಬಂದ ಹಿನ್ನೆಲೆಯಲ್ಲಿ ದಡಕ್ಕೆ ತಂದು ತೆರೆದು ನೋಡಿದಾಗ ಮಗು ಪತ್ತೆಯಾಗಿತ್ತು.

- Advertisement -

ನಂತರ ಚೌಧರಿ ಮಗುವನ್ನು ಮನೆಗೆ ಕೊಂಡು ಹೊಗಿದ್ದರು. ಇದರಲ್ಲಿ ಕಾನೂನು ಸಮಸ್ಯೆಗಳು ಬರಬಹುದು ಎಂದು ಗ್ರಾಮದ ಹಿರಿಯರು ಸಲಹೆ ನೀಡಿದಾಗ ಚೌಧರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದೀಗ ನ್ಯಾಯಾಲಯದ ಆದೇಶದಂತೆ ಮಗುವನ್ನು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ. ಚೌಧರಿ ಮಗುವಿಗೆ ‘ಗಂಗಾ’ ಎಂದು ನಾಮಕರಣ ಮಾಡಿದ್ದರು.



Join Whatsapp