ಸುದೀರ್ಘ 50 ವರ್ಷಗಳ ಬಳಿಕ ಭಾರತಕ್ಕೆ ಮರಳುತ್ತಿರುವ ಯುಎಇಯ ಅನಿವಾಸಿ ಭಾರತೀಯ ಮಹಿಳೆ !

Prasthutha|

ಅಬುಧಾಬಿ : ಸುಮಾರು ಐವತ್ತು ವರ್ಷಗಳ ಕಾಲ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ನಲ್ಲಿ ಕಳೆದಿದ್ದ ಭಾರತೀಯ ಮೂಲದ ಮಹಿಳೆಯೊಬ್ಬರು ಇದೇ ಮೊದಲ ಬಾರಿಗೆ ತನ್ನ ತವರಿಗೆ ಹಿಂದಿರುಗುತ್ತಿದ್ದಾರೆ. ಎಪ್ಪತ್ತೆರಡು ವರ್ಷದ ಖತ್ಲೀನ್‌ ರಾಂಧವ ತನ್ನ ತವರು ನಗರ ಗೋವಾದ ಮಾರ್ಗೊವಾಗೆ ಮರಳುತ್ತಿದ್ದಾರೆ. ಯುಎಇಯಲ್ಲೇ ಮದುವೆಯಾಗಿ, ಮಕ್ಕಳನ್ನೂ ಹೊಂದಿರುವ ಖತ್ಲೀನ್‌, ನಿವೃತ್ತಿಯಾಗಿ ಹನ್ನೊಂದು ವರ್ಷವಾದರೂ, ತವರಿಗೆ ಮರಳುವ ಮನಸ್ಸು ಮಾಡಿರಲಿಲ್ಲ.

- Advertisement -

1971, ಮೇ 3ರಂದು ಖತ್ಲೀನ್‌ ಯುಎಇಗೆ ಬಂದಿದ್ದರು. “ಯುಎಇ ನನಗೆ ಎಲ್ಲವನ್ನೂ ನೀಡಿದೆ. ನನಗೆ ನನ್ನ ಪತಿ ಇಲ್ಲೇ ಸಿಕ್ಕರು. ನನ್ನ ದಿವಂಗತ ಪತಿ ಹತ್ತು ವರ್ಷಕ್ಕೂ ಹೆಚ್ಚು ಕಾಲ ಅಮೆರಿಕದಲ್ಲಿದ್ದರೂ ನಾನು ಯುಎಇ ಬಿಟ್ಟು ಹೋಗಿರಲಿಲ್ಲ. ನಾನು ಇಲ್ಲೇ ಇದ್ದು, ನನ್ನ ಮಕ್ಕಳನ್ನು ಬೆಳೆಸಿದ್ದೇನೆ” ಎಂದು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಖತ್ಲೀನ್‌ ತಿಳಿಸಿದ್ದಾರೆ.

“ಯುಎಇ ನೀಡಿದಂತಹ ಭದ್ರತೆ ಮತ್ತು ಸುರಕ್ಷತೆ ನನಗೆ ಇನ್ನೊಂದು ದೇಶ ನೀಡುತ್ತದೆ ಎಂಬುದು ನನ್ನಿಂದ ಯೋಚಿಸಲೂ ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.

- Advertisement -

“ಮೂರು ತಲೆ ಮಾರಿನ ಆಡಳಿತಗಾರರು, ಇಂದು ಈ ದೇಶ ಹೀಗಿರುವುದಕ್ಕೆ ಶ್ರಮಿಸಿದುದನ್ನು ನಾನು ನೋಡಿದ್ದೇನೆʼʼ ಎಂದು ಅವರು ತಿಳಿಸಿದ್ದಾರೆ.

ಖತ್ಲೀನ್‌ ಭಾರತದ ಮುಂಬೈಯ ಬಾಂದ್ರಾದಲ್ಲಿ ಹುಟ್ಟಿ ಬೆಳೆದವರು. 1971, ಮೇ 3ರಂದು ತಮ್ಮ ಸಹೋದರಿ ಕ್ವೀನಿ ಯುಎಇಗೆ ಬಂದಿದ್ದರು, ಅವರ ಜೊತೆಗೆ ಖತ್ಲೀನ್‌ ಕೂಡ ಬಂದಿದ್ದರು. ಇಬ್ಬರಿಗೂ ಅಲ್‌ ಫಾಹಿದಿಯ ಅಂಬಾಸ್ಸಡರ್‌ ಹೋಟೆಲ್‌ ನಲ್ಲಿ ಉದ್ಯೋಗ ಪಡೆದಿದ್ದರು.

ಸ್ವಲ್ಪ ಸಮಯದ ಬಳಿಕ ಖತ್ಲೀನ್‌ ತಮ್ಮ ಪತಿ ಅಮರ್‌ ರಾಂಧವ ಅವರನ್ನು ಭೇಟಿಯಾಗಿದ್ದರು. ಅವರೂ ಹೋಟೆಲ್‌ ಉದ್ಯೋಗಿಯಾಗಿದ್ದರು. 1975ರಲ್ಲಿ ಅವರ ವಿವಾಹವಾಯಿತು.

ಜೂ. 24ರಂದು ತಾನು ಭಾರತಕ್ಕೆ ತೆರಳುತ್ತಿದ್ದು, ಅಲ್ಲಿ ಸ್ವಲ್ಪ ಬಾಕಿಯುಳಿದಿರುವ ಕೆಲಸ ಪೂರ್ಣಗೊಳಿಸಬೇಕಿದೆ. ನನ್ನ ಪುತ್ರಿಯರಾದ ಮೆಲಿಸ್ಸಾ ಮತ್ತು ಕರೀನ್‌ ಇಲ್ಲೇ ಇರುತ್ತಾರೆ ಮತ್ತು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ನನಗೆ ಇಲ್ಲೊಂದು ಮನೆಯಿದೆ ಎಂಬ ಭಾವನೆ ನನ್ನಲ್ಲಿರುತ್ತದೆ.  



Join Whatsapp