ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಫೆಲೆಸ್ತೀನ್ ಮಕ್ಕಳ ಮತ್ತು ಮಹಿಳೆಯರ ರಕ್ತ ಹರಿಸಿ ಆ ಮೂಲಕ ತನ್ನ ಅಧಿಕಾರ ಉಳಿಸುವ ಪ್ರಯತ್ನ ನಡೆಸಿದ್ದರು ಎಂದು ಫೆಲೆಸ್ತೀನ್ ವಿದೇಶ ಮಂತ್ರಾಲಯ ಹೇಳಿದೆ. ವೆಸ್ಟ್ ಬ್ಯಾಂಕ್ ಮತ್ತು ಜೆರುಸಲೇಂನಲ್ಲಿ ಉದ್ವಿಗ್ನತೆ ಹೆಚ್ಚಿಸಿ, ಅಲ್ಲಿ ಯುದ್ಧೋನ್ಮಾದ ಸೃಷ್ಟಿಸಿ ಆ ಮೂಲಕ ತನ್ನ ರಾಜಕೀಯ ವಿರೋಧಿಗಳು ಸರ್ಕಾರ ರಚಿಸುವುದನ್ನು ತಡೆಯಲು ನೆತನ್ಯಾಹು ಯತ್ನಿಸಿದರು ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
“ನೆತನ್ಯಾಹು ಮತ್ತು ಅವರ ತಂಡವು ಆಕ್ರಮಿತ ಪ್ರದೇಶದಲ್ಲಿ ಬಲಪಂಥೀಯ ಮತ್ತು ತೀವ್ರಗಾಮಿ ಬಲಪಂಥೀಯರ ಭದ್ರಕೋಟೆಯನ್ನು ರಕ್ಷಿಸಲು 2009 ರಿಂದ ರಕ್ತಸಿಕ್ತ ಹಿಂಸಾಚಾರದ ಸರಮಾಲೆಗಳನ್ನೇ ಅವಲಂಬಿಸಿದೆ” ಎಂದು ಅದು ಹೇಳಿದೆ. “ಫೆಲೆಸ್ತೀನಿಯರ ರಕ್ತ ಮತ್ತು ಅದರ ಭವಿಷ್ಯದ ಪೀಳಿಗೆಯನ್ನು ಬಲಿ ಕೊಟ್ಟು ನೇತನ್ಯಾಹು ನ್ಯಾಯಾಲಯದಲ್ಲಿ ತನ್ನನ್ನು ತಪ್ಪಿತಸ್ಥ ಸ್ಥಾನದಿಂದ ಮುಕ್ತರಾಗಲು ಇವೆಲ್ಲವನ್ನೂ ಮಾಡುತ್ತಿದ್ದಾರೆ” ಎಂದು ಮಂತ್ರಾಲಯ ಆರೋಪಿಸಿದೆ.
ಇತ್ತೀಚೆಗೆ ಇಸ್ರೇಲ್ ನೆಸೆಟ್ (ಸಂಸತ್ತು) ನಲ್ಲಿ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ನೇತನ್ಯಾಹು ಅವರು ನೆಫ್ತಾಲಿ ಬೆನೆಟ್ ನೇತೃತ್ವದ ವಿರೋಧ ಪಕ್ಷಗಳ ಸಮ್ಮಿಶ್ರ ಒಕ್ಕೂಟದ ಮುಂದೆ ಒಂದು ಮತಗಳ ಅಂತರದಿಂದ ಸೋಲೊಪ್ಪಿಕೊಂಡು ಪದಚ್ಯುತಗೊಂಡಿದ್ದರು.