ನೀವು ಕುಟುಂಬ ಯೋಜನೆ ಅಳವಡಿಸಿಕೊಳ್ಳಿ: ವಲಸೆ ಮುಸ್ಲಿಮರಿಗೆ ಅಸ್ಸಾಂ ಮುಖ್ಯಮಂತ್ರಿಯ ಸಲಹೆ

Prasthutha|

ರಾಜಕೀಯ ಪ್ರೇರಿತ ಹೇಳಿಕೆ ಎಂದು ಟೀಕಿಸಿದ ಎಐಯುಡಿಎಫ್

- Advertisement -

ಗುವಾಹಟಿ: ವಲಸೆ ಬಂದ ಮುಸ್ಲಿಮರು ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡರೆ ಬಡತನ, ಭೂ ಅತಿಕ್ರಮಣ ಹಾಗೂ ಇತರ ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸಬಹುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮುಸ್ಲಿಮರಿಗೆ ಸಲಹೆ ನೀಡಿದ್ದಾರೆ. “ಜನಸಂಖ್ಯಾ ಸ್ಫೋಟ ಮುಂದುವರಿದರೆ, ಮುಂದೊಂದು ದಿನ ಕಾಮಕ್ಯಾ ದೇವಾಲಯದ ಭೂಮಿ ಕೂಡ ಒತ್ತುವರಿಯಾಗಬಹುದು, ನನ್ನ ಮನೆ ಕೂಡ ಅತಿಕ್ರಮಣಕ್ಕೆ ಒಳಗಾಗಬಹುದು ಎಂದು ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಮುಖ್ಯಮಂತ್ರಿಯಾಗಿ ಒಂದು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಗುವಾಹಟಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಒತ್ತುವರಿ ತೆರವು ಕುರಿತ ಪ್ರಶ್ನೆಗೆ ಉತ್ತರಿಸಿ, ಸರ್ಕಾರದ ಭೂ ಒತ್ತುವರಿ ತೆರವಿನಿಂದ ನಿರಾಶ್ರಿತರಾದ ಹೆಚ್ಚಿನವರು ವಲಸೆ ಬಂದ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದರು. ಕೇಂದ್ರ ಅಸ್ಸಾಂ ಮತ್ತು ಕೆಳ ಅಸ್ಸಾಂನ ಬಂಗಾಳಿ ಮಾತನಾಡುವ ಮುಸ್ಲಿಮರನ್ನು ಬಾಂಗ್ಲಾದೇಶದಿಂದ ವಲಸೆ ಬಂದ ಮುಸ್ಲಿಮರೆಂದು ಪರಿಗಣಿಸಲಾಗುತ್ತದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇದೇ ವಿಷಯವನ್ನು ಮುಂದಿಟ್ಟು ಚುನಾವಣಾ ಪ್ರಚಾರ ನಡೆಸಿತ್ತು.

- Advertisement -


ವಲಸೆ ಬಂದ ಮುಸ್ಲಿಮರು ಅಸ್ಸಾಂನ 3.12 ಕೋಟಿ ಜನಸಂಖ್ಯೆಯ ಪೈಕಿ ಶೇಕಡಾ 31 ರಷ್ಟಿದ್ದಾರೆ. ಅವರು 126 ವಿಧಾನಸಭಾ ಸ್ಥಾನಗಳಲ್ಲಿ 35 ರಲ್ಲಿ ನಿರ್ಣಾಯಕರಾಗಿದ್ದಾರೆ. “ನಾವು ಈಗಾಗಲೇ ಕಳೆದ ವಿಧಾನಸಭೆ ಅಧಿವೇಶನದಲ್ಲಿ ಜನಸಂಖ್ಯಾ ನೀತಿಯನ್ನು ಜಾರಿಗೆ ತಂದಿದ್ದೇವೆ. ಆದರೆ ಜನಸಂಖ್ಯೆಯ ಹೊರೆಯನ್ನು ಕಡಿಮೆ ಮಾಡಲು ನಾವು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದೊಂದಿಗೆ ಕೆಲಸ ಮಾಡಲು ಬಯಸುತ್ತೇವೆ” ಎಂದು ಶರ್ಮಾ ಹೇಳಿದರು.


“ನಾವು ಜನಸಂಖ್ಯೆಯನ್ನು ನಿಯಂತ್ರಿಸಿದರೆ ಹಲವು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಬಹುದು. ವಲಸೆ ಬಂದ ಮುಸ್ಲಿಮರು ಕುಟುಂಬ ಯೋಜನೆ ಯೋಜನೆಯನ್ನು ಅಳವಡಿಸಿಕೊಳ್ಳಬೇಕು. ಇದು ಅವರೊಂದಿಗೆ ನನ್ನ ಮನವಿ. ಈ ವಿಷಯದಲ್ಲಿ ತಾವು ಬದ್ರುದ್ದೀನ್ ಅಜ್ಮಲ್ ಅವರ ಎಐಯುಡಿಎಫ್ ಮತ್ತು ಎಎಎಂಎಸ್ಯು ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ಸೇರಿ ಕೆಲಸ ಮಾಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.


“ಮುಖ್ಯಮಂತ್ರಿಯವರ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ ಮತ್ತು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡಿದೆ” ಎಂದು ಎಐಯುಡಿಎಫ್ ಪ್ರಧಾನ ಕಾರ್ಯದರ್ಶಿ ಮತ್ತು ಮಂಚಾಚಾರ್ ಕ್ಷೇತ್ರದ ಶಾಸಕ ಅನೀಮುಲ್ ಇಸ್ಲಾಂ ಟೀಕಿಸಿದ್ದಾರೆ.



Join Whatsapp