ಜೆರುಸಲೇಂ : ಆಕ್ರಮಿತ ಪೂರ್ವ ಜೆರುಸಲೇಂನ ಹಳೆ ನಗರದಲ್ಲಿ ಇಸ್ರೇಲ್ ನ ಬಲಪಂಥೀಯ ರಾಷ್ಟ್ರೀಯವಾದಿಗಳ ವಿವಾದಾತ್ಮಕ ಮೆರವಣಿಗೆ ನಡೆಲು ಅನುಮತಿ ನೀಡಲಾಗಿದೆ ಎಂದು ಅಲ್ಲಿನ ಸರಕಾರ ತಿಳಿಸಿದೆ. ಮುಂದಿನ ವಾರ ಈ ಮೆರವಣಿಗೆ ನಡೆಸಲು ಉದ್ದೇಶಿಸಲಾಗಿದೆ. ಭದ್ರತಾ ಕಾರಣಗಳಿಗಾಗಿ ಮೆರವಣಿಗೆ ರದ್ದುಪಡಿಸಲಾದ ಒಂದೇ ದಿನದಲ್ಲಿ ಮತ್ತೆ ಅನುಮತಿ ನೀಡಲಾಗಿದೆ.
ಹಳೆ ನಗರದ ಡಾಮಸ್ಕಸ್ ಗೇಟ್ ಮತ್ತು ಮುಸ್ಲಿಂ ಪ್ರದೇಶಗಳಲ್ಲಿ ʼಧ್ವಜ ಮೆರವಣಿಗೆʼ ಎಂಬ ವಿವಾದಾತ್ಮಕ ಮೆರವಣಿಗೆ ನಡೆಸಲು ಹಲವು ಇಸ್ರೇಲಿ ಬಲಪಂಥೀಯ ಗುಂಪುಗಳು ಯೋಜನೆ ರೂಪಿಸಿವೆ.
ಪೊಲೀಸರು ಅನುಮತಿ ನಿರಾಕರಿಸಿದ್ದ ಹಿನ್ನೆಲೆಯಲ್ಲಿ, ಬಲಪಂಥೀಯ ಗುಂಪುಗಳು ಮೆರವಣಿಗೆ ರದ್ದುಪಡಿಸಿದ್ದವು. ಆದರೆ, ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಂಗಳವಾರ ನಡೆದ ಸಭೆಯಲ್ಲಿ ಮುಂದಿನ ವಾರ ಮೆರವಣಿಗೆ ನಡೆಸಲು ಸಚಿವರು ಒಪ್ಪಿಗೆ ನೀಡಿದರು ಎಂದು ವರದಿಯಾಗಿದೆ.
ಮುಂದಿನ ಮಂಗಳವಾರ ಮೆರವಣಿಗೆ ನಡೆಯಲಿದೆ. ಪೊಲೀಸರು ಮತ್ತು ಕಾರ್ಯಕ್ರಮ ಆಯೋಜಕರ ನಡುವೆ ಈ ಬಗ್ಗೆ ಒಂದು ರೂಪುರೇಷೆ ರಚನೆಯಾಗಲಿದೆ ಎಂದು ನೆತನ್ಯಾಹು ಅವರ ಕಚೇರಿ ಮೂಲಗಳು ತಿಳಿಸಿವೆ.
ಹಮಾಸ್ ನ ಹಿರಿಯ ಅಧಿಕಾರಿ ಖಲೀಲ್ ಅಲ್-ಹಯ್ಯಾ ಅವರು, ಪೂರ್ವ ಜೆರುಸಲೇಂ ಮತ್ತು ಅಲ್-ಅಖ್ಸಾ ಮಸೀದಿ ಆವರಣಕ್ಕೆ ಮೆರವಣಿಗೆ ತಲುಪಲು ಅವಕಾಶ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಇಸ್ರೇಲ್ ಗೆ ಎಚ್ಚರಿಕೆ ನೀಡಿದ್ದರು. ಬಲಪಂಥೀಯ ಸಂಘಟನೆಗಳ ಯೋಜನೆ ಪ್ರಕಾರ ನಾಳೆ (ಗುರುವಾರ) ಮೆರವಣಿಗೆ ನಡೆಯಬೇಕಿತ್ತು.