ಕಾನ್ಪುರ : ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 17 ಮಂದಿ ಮೃತಪಟ್ಟಿದ್ದು, ಇತರೆ 20 ಮಂದಿ ಗಾಯಗೊಂಡಿದ್ದಾರೆ. ಮಿನಿಬಸ್ ಹಾಗೂ ಜೆಸಿಬಿ ಲೋಡರ್ ನಡುವಿನ ಮುಖಾಮುಖಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಜೀವ ಕಳೆದುಕೊಂಡವರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.
ದಿಲ್ಲಿ ಮೂಲದ ಬಸ್ ಲಕ್ನೋಗೆ ತೆರಳುತ್ತಿದ್ದಾಗ ಕಾನ್ಪುರದ ಸಚೇಂದಿ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಗಾಯಾಳುಗಳಿಗೆ ನಗರದ ಹ್ಯಾಲೆಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ಬಹಳ ವೇಗವಾಗಿ ಚಲಿಸುತ್ತಿತ್ತು. ಎದುರಿನಿಂದ ಬಂದ ಜೆಸಿಬಿ ಲೋಡರ್ಗೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬಸ್ ನಜ್ಜುಗುಜ್ಜಾಗಿದ್ದು, ಬಸ್ನಲ್ಲಿದ್ದ ಬಹುತೇಕ ಎಲ್ಲರೂ ಒಳಗೆ ಸಿಲುಕಿಕೊಂಡಿದ್ದಾರೆ. 16 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಒಬ್ಬರು ಚಿಕಿತ್ಸೆ ವೇಳೆ ಅಸುನೀಗಿದ್ದಾರೆ.
ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳ ಕುಟುಂಬದವರಿಗೆ ತಲಾ 50,000 ರೂ ಪ್ರಕಟಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ತಲಾ 2 ಲಕ್ಷ ರೂ ಆರ್ಥಿಕ ನೆರವು ನೀಡಲಾಗುವುದು. ಇದರೊಂದಿಗೆ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸುವಂತೆ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಹಾಗೂ ತನಿಖೆಗೆ ಕಾರಣದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಲಾಗಿದೆ’ ಎಂದು ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.