ಮನೋವೈದ್ಯೆಯಿಂದ ಕಳವಾಗಿದ್ದ ಮಗು ಪತ್ತೆಯಾದರೂ ಪೋಷಕರ ಮಡಿಲು ಸೇರಲು ವಿಳಂಬ !

Prasthutha|

15 ಲಕ್ಷ ರೂ. ಹಣಕ್ಕಾಗಿ ನವಜಾತ ಶಿಶುವೊಂದನ್ನು ಸರ್ಕಾರಿ ಆಸ್ಪತ್ರೆಯಿಂದ ಅಪಹರಿಸಿ ಮಾರಾಟ ಮಾಡಿದ ಡಾ.ರಶ್ಮಿಯ ವಿಚಾರಣೆಯ ಬಳಿಕ ಮಗು ಪತ್ತೆಯಾಗಿದ್ದು, ಮಗುವಿನ ಡಿಎನ್ಎ ಪರೀಕ್ಷೆ ನಡೆಸಿ ನಿಜವಾದ ಪೋಷಕರಿಗೆ ಒಪ್ಪಿಸಲು ಪೊಲೀಸರು ನಿರ್ಧರಿಸಿದ್ದಾರೆ.

- Advertisement -

ಘಟನೆಯ ವಿವರ: ಬೆಂಗಳೂರಿನ ಚಾಮರಾಜಪೇಟೆಯ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಕಳೆದ ವರ್ಷದ ಮೇ 29ರಂದು ಪಾದರಾಯನಪುರದ ನಿವಾಸಿ ನವೀದ್ ಪಾಷ ಎಂಬವರ ಪತ್ನಿ ಹುಸ್ಮಾಬಾನು ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ವೈದ್ಯರ ಸೋಗಿನಲ್ಲಿ ಬಂದ ಡಾ.ರಶ್ಮಿ ಕ್ಷಣಾರ್ಧದಲ್ಲಿ ಮಗುವನ್ನು ಅಪಹರಿಸಿ ಪರಾರಿಯಾಗಿದ್ದರು.

ಪಾದರಾಯನಪುರದ ನವೀದ್ ಪಾಷ ಹಾಗೂ ಹುಸ್ನಾಬಾನು ದಂಪತಿಗೆ ಕಳೆದ 2020ರ ಮೇ 29ರಂದು ಚಾಮರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಾಗಿತ್ತು. ಶಿಶು ಜನಿಸಿದ ಎರಡು ಗಂಟೆಯಲ್ಲಿ ಆರೋಪಿತೆ ಡಾ.ರಶ್ಮಿ ಕದ್ದಿದ್ದಳು. ಮಗು ಕಳ್ಳತನವಾಗಿ ಒಂದು ವರ್ಷಕ್ಕೆ ಅಂದರೆ ಕಳೆದ ತಿಂಗಳು ಮೇ 29ರಂದು ಪೊಲೀಸರು ಮಗು ಪತ್ತೆ ಹಚ್ಚಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು.

- Advertisement -

ಕಳ್ಳತನವಾಗಿದ್ದ ಮಗು ಒಂದು ವರ್ಷದ ಬಳಿಕ ಇತ್ತೀಚೆಗೆ ಪತ್ತೆಯಾಗಿದೆ. ಮಗುವನ್ನು ಕಳ್ಳತನ ಮಾಡಿದ್ದ ಕಳ್ಳಿ ಡಾ.ರಶ್ಮಿಯನ್ನು ಪೊಲೀಸರು ಬಂಧಿಸಿ ಆಕೆ ನೀಡಿದ ಮಾಹಿತಿ ಮೇರೆಗೆ ಕೊಪ್ಪಳ ಮೂಲದ ದಂಪತಿಯ ಬಳಿಯಿದ್ದ ಮಗುವನ್ನು ಬೆಂಗಳೂರಿಗೆ ಕರೆ ತಂದಿದ್ದಾರೆ. ಆದರೆ ಮಗು ಸಿಕ್ಕಿದರೂ ಕೂಡ ತಾಯಿ ಮಡಿಲು ಸೇರಲು ಕಾನೂನು ತೊಡಕು ಎದುರಾಗಿದೆ. ಹೆತ್ತವರ ಮಡಿಲಿಗೆ ಮಗು ಒಪ್ಪಿಸುವ ಮುನ್ನ ಡಿಎನ್ಎ ಸೇರಿದಂತೆ ಹಲವು ರೀತಿಯ ವೈದ್ಯಕೀಯ ಪರೀಕ್ಷೆ ಮಾಡಿಸಿ ವರದಿ ಬಂದ ಬಳಿಕ ಮಕ್ಕಳ ಕಲ್ಯಾಣ ಸಮಿತಿಗೆ ಪೊಲೀಸರು ವರದಿ ನೀಡಲಿದ್ದಾರೆ. ಅಲ್ಲಿಯೂ ವಿಚಾರಣೆ ಆದ ಬಳಿಕವಷ್ಟೇ ಯಾರ ಮಡಿಲಿಗೆ ಮಗು ನೀಡಬೇಕು ಎಂಬುದರ ಬಗ್ಗೆ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಪತ್ತೆಯಾಗಿರುವ ಮಗುವಿನ ನಿಜವಾದ ಪೋಷಕರ ಬಗ್ಗೆ ವೈಜ್ಞಾನಿಕವಾಗಿ ತಿಳಿಯಲು ಪೊಲೀಸರು ಡಿಎನ್ಎ ಪರೀಕ್ಷೆ ಮೊರೆ ಹೋಗಿದ್ದು ಡಿನ್ಎನ್ಎ ಪರೀಕ್ಷೆಗೆ ಒಳಪಡಿಸಲು ನ್ಯಾಯಾಲಯ ಅನುಮತಿ ನೀಡಿರುವುದರಿಂದ ಜೂ. 16ರಂದು ಪರೀಕ್ಷೆ ನಡೆಯಲಿದೆ. ನಿಗದಿತ ದಿನಾಂಕದಂದೇ ತಾಯಿ ಹಾಗೂ ಮಗುವಿನ ಡಿಎನ್ಎ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಅಲ್ಲಿಂದ ವರದಿ ಬರಲು ಕನಿಷ್ಠ ಹತ್ತು ದಿನವಾದರೂ ಬೇಕಾಗಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಗು ಕಳೆದುಕೊಂಡ ನೋವಿನಿಂದ ಕಳೆದ ಒಂದು ವರ್ಷದಿಂದ ಹೈರಾಣಾಗಿರುವ ಪೋಷಕರ ಸಂಕಷ್ಟ ಹೇಳತೀರದು. ಪ್ರತಿ ದಿನ ಠಾಣೆಗೆ ಹೋಗಿ ಮಗು ನೀಡಿ ಎಂದು ತಾಯಿ ಹುಸ್ನಾಬಾನು ಕಣ್ಣೀರು ಸುರಿಸುತ್ತಿದ್ದಾರೆ.

ಈ ನಡುವೆ ಮಗುವನ್ನು ಪಡೆದಿದ್ದ ಕೊಪ್ಪಳ ಮೂಲದ ದಂಪತಿಯನ್ನು ಈಗಾಗಲೇ ಒಂದು ಬಾರಿ ಮಕ್ಕಳ ಕಲ್ಯಾಣ ಸಮಿತಿ ವಿಚಾರಣೆ ನಡೆಸಿದೆ. ಡಿಎನ್ಎ ವರದಿ ಬಳಿಕ ಮಗುವಿನ ಹೆತ್ತವರಿಗೂ ಹಾಗೂ ಪಾಲನೆ ಮಾಡಿದ ದಂಪತಿಗೂ ವಿಚಾರಣೆ ನಡೆಸಲಿದೆ. ಕೊಪ್ಪಳ ಮೂಲದ ದಂಪತಿ ಕೂಡ ಬೇಸರಗೊಂಡಿದ್ದಾರೆ. ತಮ್ಮದೇ ಮಗುವೆಂದು ಸಾಕಿ ಸಲಹುತ್ತಿದ್ದೇವೆ. ಮಗುವನ್ನು ರಾಜಕುಮಾರನಂತೆ ಸಾಕಿದ್ದೇವೆ. ದಯವಿಟ್ಟು ಮಗುವನ್ನು ನಮ್ಮಿಂದ ದೂರ ಮಾಡಬೇಡಿ ಎಂದು ಕಣ್ಣೀರು ಸುರಿಸಿ ಪೊಲೀಸರಲ್ಲಿ ಮನವಿ ಮಾಡುತ್ತಿದ್ದಾರೆ. ಸದ್ಯ ಮಗು ಈ ಕೊಪ್ಪಳ ದಂಪತಿಯ ಆಶ್ರಯದಲ್ಲಿದೆ.

ಮಗು ಕಳ್ಳತನ ಮಾಡಿದ್ದ ಆರೋಪಿ ಉತ್ತರ ಕರ್ನಾಟಕದ ಮೂಲದ ರಶ್ಮಿ ಮಗುವನ್ನು ಕೊಪ್ಪಳದ ದಂಪತಿಗೆ ನೀಡಿ 15 ಲಕ್ಷ ರೂ. ಪಡೆದುಕೊಂಡಿದ್ದಳು. ಮನೋವೈದ್ಯೆಯಾಗಿದ್ದ ಆರೋಪಿಯು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ವಿಜಯನಗರದ ನಿವಾಸಿಯಾಗಿದ್ದ ಈಕೆ 2014ರಲ್ಲಿ ಹುಬ್ಬಳ್ಳಿಯ ಎಸ್ಡಿಎಂ ಆಸ್ಪತ್ರೆಯಲ್ಲಿ ಕೆಲಸ ಮಾಡುವಾಗ ಕೊಪ್ಪಳ ಮೂಲದ ದಂಪತಿ ಪರಿಚಯವಾಗಿತ್ತು. ದಂಪತಿಯ ಮಗುವಿಗೆ ಬುದ್ಧಿಮಾಂದ್ಯತೆ ಇದ್ದ ಹಿನ್ನೆಲೆಯಲ್ಲಿ ಮನೋವೈದ್ಯೆಯಾಗಿರುವ ಡಾ.ರಶ್ಮಿ ಬಳಿ ಚಿಕಿತ್ಸೆ ಕೊಡಿಸುತ್ತಿದ್ದರು. ಚಿಕಿತ್ಸೆ ನೀಡಿದರೂ ಪ್ರಯೋಜನವಾಗದ ಕಾರಣ ಪೋಷಕರು ಬೇಸತ್ತಿದ್ದರು.

 ಹಾಗಾಗಿ ಚಿಕಿತ್ಸೆ ನೀಡುತ್ತಿದ್ದ ವೈದ್ಯೆ ರಶ್ಮಿ ದಂಪತಿಗೆ ಸುಳ್ಳು ಉಪಾಯವೊಂದನ್ನು ಹೇಳಿ ಮರಳು ಮಾಡಿದ್ದಾರೆ. ನಿಮ್ಮದೇ ವೀರ್ಯಾಣು ಮತ್ತು ಅಂಡಾಣು ಪಡೆದು ಮತ್ತೊಂದು ಮಹಿಳೆಗೆ ಇಂಜೆಕ್ಟ್ ಮಾಡಿ ಮಗು ಜನಿಸಿದ ಬಳಿಕ ನಿಮಗೆ ನೀಡುತ್ತೇನೆ ಎಂದು ಹೇಳಿ 15 ಲಕ್ಷಕ್ಕೆ ಡೀಲ್ ಮಾಡಿಕೊಂಡಿದ್ದಳು. ಅದರಂತೆ ಸಂಚು ರೂಪಿಸಿ ಕಳೆದ ವರ್ಷದ ಮೇ 29ರಂದು ಚಾಮರಾಜಪೇಟೆಯ ಸರ್ಕಾರಿ ಆಸ್ಪತ್ರೆಗೆ ಆಟೋದಲ್ಲಿ ಬಂದು ಹುಸ್ಮಾಬಾನು ಅವರಿಗೆ ಸೇರಿದ ನವಜಾತ ಶಿಶವನ್ನು ಕ್ಷಣಾರ್ಧದಲ್ಲಿ ಅಪಹರಿಸಿ ಪರಾರಿಯಾಗಿ ಅದನ್ನು ಕೊಪ್ಪಳದ ದಂಪತಿಗೆ ನೀಡಿದ್ದಳು ಎಂದು ಪೊಲೀಸರ ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ.

Join Whatsapp