MRPL ನಲ್ಲಿ ಸ್ಥಳೀಯರಿಗೆ ಉದ್ಯೋಗಕ್ಕಾಗಿ ಮನೆ ಮನೆ ಪ್ರತಿಭಟನೆ

Prasthutha|

MRPL ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ವಿವಿಧ ಸಂಘ ಸಂಸ್ಥೆಗಳು ಶನಿವಾರ ಮನೆ ಮನೆ ಪ್ರತಿಭಟನೆ ನಡೆಸಿದವು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಡೆದ ಈ ಅಭಿಯಾನದಲ್ಲಿ ಸಾರ್ವಜನಿಕರು, ವಿವಿಧ ಸಂಘಟನೆಗಳ ಸದಸ್ಯರು ತಮ್ಮ ಮನೆಗಳ ಮುಂದೆ ಭಿತ್ತಿಪತ್ರ ಪ್ರದರ್ಶಿಸಿ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿದರು. “ತುಳುನಾಡ ಅಭಿವೃದ್ಧಿಡ್ ತುಳುವಪ್ಪೆ ಜೋಕುಲೆಗ್ ಮಲ್ಲ ಪಾಲ್,” “ನೆಲ ನಮ್ಮದು, ಜಲ ನಮ್ಮದು ಉದ್ಯೋಗವೂ ನಮ್ಮದೆ” ಮುಂತಾದ ಬರಹಗಳು ಗಮನ ಸೆಳೆದವು.

- Advertisement -

ಅದೇ ರೀತಿ, ಸಂಸದರೆ, ಶಾಸಕರುಗಳೇ ಭರವಸೆ ಸಾಕು, ಉದ್ಯೋಗ ಬೇಕು, “ಹಲೋ ಸಂಸದ ನಳಿನ್ ಕುಮಾರ್…MRPL ಉದ್ಯೋಗ ನೇಮಕಾತಿ ರದ್ದುಗೊಳಿಸಿ, ಆಗದಿದ್ದಲ್ಲಿ ರಾಜೀನಾಮೆ ಕೊಡಿ” “MRPL ಉದ್ಯೋಗಗಳು ಸ್ಥಳೀಯರ ಹಕ್ಕು” ಮುಂತಾದ ಬರಹಗಳು ಭಿತ್ತಿಪತ್ರದಲ್ಲಿ ಕಂಡುಬಂದವು.

MRPL ಸಂಸ್ಥೆಯಲ್ಲಿ ಉದ್ಯೋಗ ನೇಮಕಾತಿ ಇತ್ತೀಚೆಗೆ ವಿವಾದಕ್ಕೆ ಕಾರಣವಾಗಿದ್ದು, ಕರ್ನಾಟಕದಿಂದ 6 ಸಾವಿರ ಅರ್ಜಿ ಬಂದಿದ್ದರೂ, ಕೇವಲ 14 ಮಂದಿಗೆ ಮಾತ್ರ ಉದ್ಯೋಗಾವಕಾಶ ನೀಡಲಾಗಿದೆ. ಬಹುತೇಕ ಎಲ್ಲಾ ಉದ್ಯೋಗಗಳು ಉತ್ತರ ಭಾರತದವರ ಪಾಲಾಗಿದೆ ಎಂಬ ಅಂಶ ಬೆಳಕಿಗೆ ಬಂದ ಬಳಿಕ ಜಿಲ್ಲೆಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಜಿಲ್ಲೆಯ ಪ್ರತಿನಿಧಿಗಳು MRPL ಮುಖ್ಯಸ್ಥರನ್ನು ಭೇಟಿ ಮಾಡಿ ನೇಮಕಾತಿಗೆ ತಡೆ ನೀಡುವಂತೆ ಒತ್ತಾಯಿಸಿದ್ದರು.



Join Whatsapp