ಲಸಿಕಾ ಅಭಿಯಾನ, ಪ್ರಚಾರ ಹೊರತು ಸಾಧನೆ ಪ್ರಶ್ನಾರ್ಹ!

Prasthutha|

-ಪೇರೂರು ಜಾರು

- Advertisement -

ಕೋವಿಡ್-19ರ ಮೂರನೆಯ ಅಲೆಯ ಬಲೆಯತ್ತ ಭಾರತ ನಡೆದಿದೆ. ಲಸಿಕೆಯೇ ಶ್ರೀರಕ್ಷೆ ಆಗಬೇಕು. ಭಾರತವನ್ನು ಈಗಾಗಲೇ ಕೋವಿಡ್ ಮೂರನೆಯ ಅಲೆಯ ಭಯ ಆವರಿಸಿದೆ, ಸರಕಾರ ಕೂಡಲೆ ಸಂಪೂರ್ಣ ಲಸಿಕೆ ಕಾರ್ಯ ಸಾಧಿಸಬೇಕು ಎಂದು ಐಎಂಎ- ಭಾರತೀಯ ವೈದ್ಯಕೀಯ ಒಕ್ಕೂಟ ಹೇಳಿದೆ. ಆದರೆ ಸರಕಾರಕ್ಕೆ ಅದು ಸಾಧ್ಯವೆ? ಭಾರತದ ಜನಸಂಖ್ಯೆ 140 ಕೋಟಿಯಷ್ಟು. ಎಲ್ಲರ ವ್ಯಾಕ್ಸಿನೇಶನ್ ಗೆ ಒಂದೂವರೆ ಲಕ್ಷ ಕೋಟಿ ರೂಪಾಯಿ ಬೇಕು. ಭಾರತದ ಎಲ್ಲ ರಾಜ್ಯಗಳ, ಕೇಂದ್ರದ ಆರೋಗ್ಯ ಆಯವ್ಯಯದ ಮೊತ್ತ ಕೂಡ ಅಷ್ಟಿಲ್ಲ.

ಯಾವುದೇ ಕ್ಷಣದಲ್ಲಿ ಮುಖ್ಯ ಬಾಗಿಲಿನಿಂದಲೇ ಮೂರನೆಯ ಅಲೆಯ ಕೊರೋನಾ ಅಪ್ಪಳಿಸುವ ಅಪಾಯ ಇದೆ. ಎಲ್ಲರಿಗೂ ಲಸಿಕೆ ಹಾಕಿಸುವ ಕಾರ್ಯವನ್ನು ಸರಕಾರ ತೀವ್ರಗೊಳಿಸಬೇಕು ಎಂದು ಇಂಡಿಯನ್ ಮೆಡಿಕಲ್ ಎಸೋಸಿಯೇಶನ್ ಹೇಳಿದ್ದು ಸರಿ. ಡಬ್ಲ್ಯುಎಚ್‌ ಒ- ವಿಶ್ವ ಆರೋಗ್ಯ ಸಂಸ್ಥೆ ಸಹ ಇದನ್ನೇ ಹೇಳಿದೆ. ಜಗತ್ತಿನ ಈಗಿನ ಜನಸಂಖ್ಯೆ 800 ಕೋಟಿಯಷ್ಟು. ಇವರಿಗೆಲ್ಲ ಲಸಿಕೆ ಹಾಕಿಸಲು ಹತ್ತು ಲಕ್ಷ ಕೋಟಿ ರೂಪಾಯಿ ಕನಿಷ್ಠ ಬೇಕು. ಇತರ ವೈದ್ಯಕೀಯ ವೆಚ್ಚ, ದೇಶ ನಡೆಯಬೇಕು. ಹಾಗಾಗಿ ಇದು ಅಭಿಯಾನ ಎಂಬ ಪ್ರಚಾರ ಅಷ್ಟೇ.

- Advertisement -

ಜಾಗತಿಕವಾಗಿ ಇಲ್ಲಿಯವರೆಗೆ 38 ಶೇಕಡಾದಷ್ಟು ಮಾತ್ರ ಲಸಿಕೆ ನೀಡಲು ಸಾಧ್ಯವಾಗಿದೆ. ಭಾರತದಲ್ಲಿ ಆಗಿರುವುದು ಶೇಕಡಾ 10ರಷ್ಟು ಮಾತ್ರ. ಜಗತ್ತಿನ ವಾಣಿಜ್ಯ ವ್ಯವಹಾರ ಸ್ಥಗಿತವಾಗಿಲ್ಲ. ಪ್ರವಾಸೋದ್ಯಮ ನಿಂತಿಲ್ಲ. ಆದರೆ ಎಲ್ಲವೂ ಹಿನ್ನಡೆ ಅನುಭವಿಸುತ್ತಿವೆ. ಅವಕ್ಕೂ ಲಸಿಕೆಯ ಅಗತ್ಯವಿದೆ.

ಕೋವಿಡ್ ನಿಂದಾಗಿ ಕಳೆದ ವರುಷ ಮುಂದೂಡಿದ್ದ ಟೋಕಿಯೋ ಒಲಿಂಪಿಕ್ಸ್ ಈ ವರುಷ ನಡೆಯುವುದಕ್ಕೂ ಹಲವರ ವಿರೋಧವಿದೆ. ಇತ್ತೀಚೆಗಷ್ಟೇ ಮೂರು ದಿನ ದಿಟಸಮ (ವರ್ಚ್ಯುಯಲ್) ಸಮಾಲೋಚನೆ ನಡೆಯಿತು.

 ಜಪಾನಿನ ವೈದ್ಯಕೀಯ ಇಲಾಖೆ ಮತ್ತು ಪ್ರತಿಪಕ್ಷಗಳು ಈಗ ಒಲಿಂಪಿಕ್ಸ್ ನಡೆಸುವುದನ್ನು ವಿರೋಧಿಸಿವೆ. ಕೆಲವರು ಸಣ್ಣ ಮಟ್ಟದ ಪ್ರತಿಭಟನೆ ಸಹ ನಡೆಸಿದ್ದಾರೆ. ಜಪಾನಿನ ಒಲಿಂಪಿಕ್ಸ್ ಮಂತ್ರಿ ತಮಾಯೋ ಮರಕಾವ ಎಲ್ಲರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಲಸಿಕೆ ನಮ್ಮ ಜವಾಬ್ದಾರಿ ಎಂದಿದ್ದಾರೆ.

ಮೂರು ದಿನಗಳ ದಿಟಸಮ ಸಭೆಯು ಐಓಸಿ- ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಉಪಾಧ್ಯಕ್ಷ ಜಾನ್ ಕೋಟ್ ಅಧ್ಯಕ್ಷತೆಯಲ್ಲಿ ನಡೆಯಿತು. ಐಓಸಿ ಅಧ್ಯಕ್ಷ ಥಾಮಸ್ ಬಾಕ್ರು ಅತ್ಯಂತ ಸುರಕ್ಷಿತ ಕ್ರೀಡಾ ಗ್ರಾಮದ ಆಶ್ವಾಸನೆ ನೀಡಿದರು. ಎಲ್ಲರಿಗೂ ಲಸಿಕೆ, ಸೂಕ್ತ ಚಿಕಿತ್ಸೆಯ ಸೌಲಭ್ಯವನ್ನು ಖಚಿತವಾಗಿ ಒದಗಿಸಲಾಗುತ್ತದೆ ಎಂದು ಜಪಾನ್ ಸರಕಾರ ಆಶ್ವಾಸನೆ ನೀಡಿದ್ದೂ ಆಗಿದೆ.

ಜುಲೈ 23ರಿಂದ ಆಗಸ್ಟ್ 24ರ ವರೆಗೆ ಟೋಕಿಯೋ ಒಲಿಂಪಿಕ್ಸ್ ನಡೆಯಲಿದೆ. 10,000 ವೈದ್ಯರು, ಅದಕ್ಕೂ ಹೆಚ್ಚಿನ ನರ್ಸ್‌ ಗಳು, 200 ಕ್ರೀಡಾ ವೈದ್ಯರು ಈಗಾಗಲೇ ನಿಯೋಜಿತರಾಗಿದ್ದಾರೆ. ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ಭರವಸೆಯನ್ನು ಜಪಾನ್ ನೀಡಿದೆ. ಆದರೆ ಜಪಾನ್ ಹಣ ಹೂಡಿದರೂ, ವೈದ್ಯರನ್ನು ಇಟ್ಟರೂ, ಸಜ್ಜುಗೊಳಿಸಿದರೂ ಅಷ್ಟೊಂದು ಪ್ರಮಾಣದಲ್ಲಿ ಲಸಿಕೆ ಜಪಾನಿಗೆ ದೊರೆಯುತ್ತದೆಯೇ ಎನ್ನುವುದು ಈಗಿನ ಪ್ರಶ್ನೆಯಾಗಿದೆ.

ಬಡ ದೇಶಗಳಲ್ಲಿ ಲಸಿಕೆ ಇನ್ನೂ ಟೇಕ್ ಆಫ್ ಆಗಿಲ್ಲ. ವಿಶ್ವಸಂಸ್ಥೆಯ ಅಂಗಸಂಸ್ಥೆ ಲೋಕ ಆರೋಗ್ಯ ಸಂಸ್ಥೆ ಅತ್ತ ಪ್ರಯತ್ನ ನಡೆಸಿದೆ. ಆದರೆ ನೋವೆಲ್ ಕೋವಿಡ್ 19 ಜಗತ್ತಿಗೆ ಬಡಿದಿರುವ ಸಾಂಕ್ರಾಮಿಕ ಆಗಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆಗೆ ಜಾಗತಿಕ ಜವಾಬ್ದಾರಿ ಇದೆ. ಭಾರತ ಸರಕಾರ ಜವಾಬ್ದಾರಿ ಜಾರಿಸಿಕೊಳ್ಳುವುದರಲ್ಲಿ ಬಲ್ಲಿದ ಎಂಬುದು ಕೆಲವರ ಅಭಿಪ್ರಾಯ. ಒಂದೇ ದಿನದಲ್ಲಿ ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಜನರ ಸಾವು ಮೇ 18ರಂದು ಆಯಿತು. ಕೋವಿಡ್ ತಡೆಯುವಲ್ಲಿ ಮೋದಿ ಸರಕಾರದ ವೈಫಲ್ಯವನ್ನು ಇದು ತೆರೆದಿಟ್ಟಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೇಳಿದರು. ಇದು ಆತಂಕಕಾರಿ. ಕೆಲಸ ಕಡಿಮೆ ಮಾಡಿ ಹೆಚ್ಚು ಪ್ರಚಾರ ಪಡೆಯುವುದು ಹೇಗೆ ಎಂಬುದರತ್ತ ಕೇಂದ್ರ ಸರಕಾರ ಗಮನ ಹರಿಸಿದೆಯೇ ಹೊರತು ಕೊರೋನಾ ಪರಿಸ್ಥಿತಿ ನಿಭಾಯಿಸುವಲ್ಲಿ ಅಲ್ಲ ಎಂದು ರಾಹುಲ್ ಕಟಕಿಯಾಡಿದರು.

ಸಾಕಷ್ಟು ರಾಜಕೀಯ ಪಕ್ಷಗಳ ನಾಯಕರು ಲಸಿಕೆ ರಾಜಕೀಯವನ್ನು ಟೀಕಿಸಿವೆ. ಕೊನೆಗೆ ಕೋರ್ಟ್ ಕೂಡ ಲಸಿಕೆ ಇಲ್ಲದೆ ಏನು ಅಭಿಯಾನ ಎಂದು ಕೇಳಿತು. ಬಿಜೆಪಿ ಸರಕಾರದ್ದು ಬಂಡವಾಳ ಇಲ್ಲದ ಬಡಾಯಿಯೆ? ಅವರ ಬಾಯಿ ಬಂಡವಾಳ ಅದ್ಭುತ ಎಂದು ವಿರೋಧ ಪಕ್ಷಗಳವರು ಸಹ ಒಪ್ಪಿಕೊಳ್ಳುತ್ತಾರೆ. ಭಾರತದ ಲಸಿಕೆ ಅಭಿಯಾನದಲ್ಲಿ ಬರೇ 18 ಕೋಟಿ ಜನರಿಗೆ ಮಾತ್ರ ಲಸಿಕೆ ನೀಡಲು ಸಾಧ್ಯವಾಗಿದೆ. ಈ ಸಂಖ್ಯೆ ಎಷ್ಟೋ ದೇಶಗಳ ಜನಸಂಖ್ಯೆಗಿಂತ ದೊಡ್ಡದು ನಿಜ, ಆದರೆ ಭಾರತದ 140 ಕೋಟಿಯಷ್ಟು ಜನರಲ್ಲಿ ಇದು ನೀರಸ ಸಾಧನೆ ಆಗಿದೆ. ಬರೇ ಶೇಕಡಾ 10ರಷ್ಟು ವ್ಯಾಕ್ಸಿನೇಶನ್ ಸಾಧಿಸಿರುವ ಭಾರತ ಅದನ್ನು ಅಭಿಯಾನ ಎಂದು ಕರೆದದ್ದು ಏಕೆ? ಜನರ ಆರೋಗ್ಯ ಪ್ರಚಾರದ ವಿಚಾರವೆ?

ಭಾರತದಲ್ಲಿ ಇಲ್ಲಿಯವರೆಗೆ ಬಂದವರು ಮತ್ತು ಹೋದವರು ಹಾಗೂ ಇದ್ದವರು ಸೇರಿ ಲಸಿಕೆ 100 ಜನರಲ್ಲಿ 13 ಜನರಿಗೆ ಮಾತ್ರ ಹಾಕಲಾಗಿದೆ. ದೇಶದಲ್ಲಿ ಲಸಿಕೆ ಹಾಕಲಾದ ಪ್ರಮಾಣ ಹತ್ತು ಶೇಕಡಾ ಮಾತ್ರ ಎಂದು ವಿಶ್ವ ತಜ್ಞರು ಅಚ್ಚರಿಪಟ್ಟು ಲೆಕ್ಕ ಕೊಟ್ಟಿದ್ದಾರೆ.

ನಾಲ್ಕು ದೇಶಗಳು ಪ್ರವಾಸಿಗರು ಸೇರಿ 100 ಜನರಿಗೆ ನೂರಕ್ಕಿಂತ ಹೆಚ್ಚು ವ್ಯಾಕ್ಸಿನೇಶನ್ ಸಾಧಿಸಿದ್ದಾರೆ. ಸೆಚೆಲೆಸ್ 134, ಯುಎಇ 117, ಇಸ್ರೇಲ್ 116, ಸ್ಯಾನ್ ಮಾರಿನೊ 114 ಆ ನಾಲ್ಕು ದೇಶಗಳಾಗಿವೆ. ಆದರೆ ಈ ದೇಶಗಳ ಜನಸಂಖ್ಯೆ ತೀರಾ ಕಡಿಮೆ. ಉದಾಹರಣೆಗೆ ಸೆಚೆಲೆಸ್ ಜನಸಂಖ್ಯೆ ಒಂದು ಲಕ್ಷದಷ್ಟು ಮಾತ್ರ. ಬಹರೇನ್ 90, ಚಿಲಿ 87, ಇಂಗ್ಲೆಂಡ್ 85, ಅಮೆರಿಕ ಸಂಯುಕ್ತ ಸಂಸ್ಥಾನ 83 ಜನಾಧಾರಿತ 100ಕ್ಕೆ ಅಷ್ಟು ಲಸಿಕೆ ಸಾಧಕ ದೇಶಗಳು.

ಇನ್ನು ಶೇಕಡಾವಾರು ಪ್ರಮಾಣದಲ್ಲಿ ಭಾರತದ ಸಾಧನೆ ಶೇ 10ರಷ್ಟು ಮಾತ್ರ. ಉಳಿದಂತೆ ಇಸ್ರೇಲ್ ಶೇ 61ರಷ್ಟು, ಮಂಗೋಲಿಯಾ ಶೇ 56ರಷ್ಟು ಇಂಗ್ಲೆಂಡ್ ಶೇ 54ರಷ್ಟು, ಯುನೈಟೆಡ್ ಅರಬ್ ಎಮಿರೇಟ್ಸ್ ಶೇ 51ರಷ್ಟು, ಬಹರೇನ್ ಶೇ 50ರಷ್ಟು, ಹಂಗೇರಿ ಶೇ 49, ಚಿಲಿ ಶೇ 48, ಅಮೆರಿಕ ಸಂಯುಕ್ತ ಸಂಸ್ಥಾನ ಶೇ 47, ಉರುಗ್ವೆ ಶೇ 47ರಷ್ಟು, ಜರ್ಮನಿ ಶೇ 35ರಷ್ಟು, ಸೆರ್ಬಿಯಾ ಶೇ 34ರಷ್ಟು, ಸ್ಪೈನ್ ಶೇ 33ರಷ್ಟು, ಇಟೆಲಿ ಶೇ 32ರಷ್ಟು, ಫ್ರಾನ್ಸ್ ಶೇ 30, ಟರ್ಕಿ ಶೇ 19, ಬ್ರೆಜಿಲ್ ಶೇ 18, ಮೆಕ್ಸಿಕೋ ಶೇ 15ರಷ್ಟು ವ್ಯಾಕ್ಸಿನೇಶನ್ ನಡೆಸಿವೆ. ಇದು ಕೂಡ ಸಂಪೂರ್ಣ ಇಲ್ಲವೇ ಪರಿಪೂರ್ಣ ಅಲ್ಲ.

 ಭಾರತದಲ್ಲಿ ವ್ಯಾಕ್ಸಿನೇಶನ್ ಆದವರ ಸಂಖ್ಯೆಯು 18.29 ಕೋಟಿ ಎನ್ನಲಾಗಿದೆ. ಇದು ಶೇಕಡಾವಾರು ಕನಿಷ್ಠ ಆದರೂ ಸಂಖ್ಯೆಯ ರೀತ್ಯಾ ದೊಡ್ಡದೇ ಆಗಿದೆ ಎಂಬುದೇ ಸಮಾಧಾನಕರ ಅಂಶ. ಇನ್ನು ಕರ್ನಾಟಕದ ಜನಸಂಖ್ಯೆ 5 ಕೋಟಿ ದಾಟಿ ಎಷ್ಟೋ ಕಾಲವಾಯಿತು. ಕರ್ನಾಟಕದಲ್ಲಿ ವ್ಯಾಕ್ಸಿನೇಶನ್ ಆಗಿರುವುದು ಬರೇ ಮೂವತ್ತು ಲಕ್ಷಕ್ಕೂ ಕಡಿಮೆ ಜನರಿಗೆ. ಇದು ಅಭಿಯಾನವೂ ಅಲ್ಲ, ಸರಕಾರದ ಕೆಲಸದ ಬಗೆಗೆ ಅಭಿಮಾನ ತರುವ ವಿಷಯವೂ ಅಲ್ಲ.

ಇವೆಲ್ಲದರ ನಡುವೆ ಲಸಿಕೆ ರಫ್ತು ವಿಚಾರ ಪ್ರಸ್ತಾಪವಾಗಿದೆ. ಕೇಂದ್ರ ಸರಕಾರಕ್ಕೆ ವಿಶೇಷ ಪರಿಸ್ಥಿತಿಯಲ್ಲಿ ಯಾವುದೇ ವಸ್ತುವಿನ ಆಮದು ಮತ್ತು ರಫ್ತು ತಡೆಯುವ ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರ ಇದೆ. ಆದರೆ ಕೇಂದ್ರದ ಬಿಜೆಪಿ ಸರಕಾರ ಅದನ್ನು ಏಕೆ ಮಾಡಲಿಲ್ಲ? ಲಸಿಕೆ ಉತ್ಪಾದನಾ ಕಂಪೆನಿಗಳಿಗೆ ಒಂದು ತೊಂದರೆ ಇದೆ. ಅವು ಉತ್ಪಾದನೆ ಮಾಡುವುದೇ ಲಾಭ ಮಾಡಲು ಹೊರತು ಜನಸೇವೆಗಲ್ಲ.

ಇತರ ದೇಶಕ್ಕೆ ಇಷ್ಟು ಕಳಿಸುವೆ ಎಂಬ ಒಪ್ಪಂದ ಆಗಿದ್ದರೆ ಅದನ್ನು ಪರಿಗಣಿಸಬೇಕಾಗುತ್ತದೆ. ಅಲ್ಲದೆ ಕೊರೋನಾ ಲೋಕಕ್ಕೆ ಆವರಿಸಿರುವ ಸಾಂಕ್ರಾಮಿಕ ಆಗಿರುವುದರಿಂದ ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರಗಳು ಅದರ ನೀತಿಯಂತೆ ಕೆಲವೆಡೆಗೆ ಲಸಿಕೆ ರವಾನಿಸಬೇಕಾಗುತ್ತದೆ. ಏನೇ ಆದರೂ ಭಾರತದ ಬಿಜೆಪಿ ಸರಕಾರವು ಲಸಿಕೆ ಮತ್ತು ಕೋವಿಡ್ ನಿರ್ವಹಿಸುವಲ್ಲಿ ಸಫಲವಾಗಿಲ್ಲ. ಕೇಂದ್ರವು ಲಸಿಕೆ, ಆಮ್ಲಜನಕ, ಮದ್ದು ಹಂಚಿಕೆಯಲ್ಲೂ ತಾರತಮ್ಯ ಮಾಡಿದೆ ಎಂಬ ದೂರು ಇದೆ. ಈ ಬಗೆಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಕೋರ್ಟ್ ಕಟಕಟೆ ಏರಿದ್ದು ಖಂಡಿತ ಸರಕಾರಕ್ಕೆ ಶೋಭೆ ತರುವುದಿಲ್ಲ. ಲಸಿಕೆ ಬಡವರಿಗೆ ಗಗನ ಕುಸುಮ ಆಗದಿರಲಿ. ಸರಕಾರಗಳು ಆ ನಿಟ್ಟಿನಲ್ಲಿ ಆಲೋಚಿಸಬೇಕು. ಔಷಧಿ ವ್ಯವಹಾರದಲ್ಲಿ ಲಾಭ ಮಾಡಲು ನೋಡುವುದು ಅಮಾನವೀಯ.



Join Whatsapp