ಅಡುಗೆ ಎಣ್ಣೆ ಬೆಲೆ ಗರಿಷ್ಠ ಏರಿಕೆ : ಲಾಕ್‌ ಡೌನ್‌ ಸಂಕಷ್ಟದಲ್ಲಿರುವ ಜನತೆಗೆ ಬೆಲೆ ಏರಿಕೆಯ ಬಿಸಿ

Prasthutha|

ನವದೆಹಲಿ : ಒಂದೆಡೆ ಜನ ಕೋವಿಡ್‌ ಲಾಕ್‌ ಡೌನ್‌ ನಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಇನ್ನೊಂದೆಡೆ ಪೆಟ್ರೋಲ್‌ ಬೆಲೆ ಕೆಲವೆಡೆ ರೂ. 100ರ ಗಡಿ ದಾಟಿದೆ. ಈ ನಡುವೆ, ಅಡುಗೆ ಎಣ್ಣೆ ಬೆಲೆ ಗರಿಷ್ಠ ಏರಿಕೆ ಕಂಡು ಜನತೆಗೆ ಮತ್ತೊಂದು ಬರೆ ಎಳೆದಿದೆ.

- Advertisement -

ಅಡುಗೆ ಎಣ್ಣೆಗೆ 150 ರೂ. ಗಡಿ ದಾಟಿ ಈಗಾಗಲೇ ಕೆಲವು ದಿನಗಳಾಗಿವೆ. ಈಗ ಪ್ಯಾಕ್‌ ಮಾಡಿದ ಅಡುಗೆ ಎಣ್ಣೆಗಳ ದರ 130 ರೂ.ಯಿಂದ 170 ರೂ. ತಲುಪಿದೆ.

ಮಂಗಳವಾರದ ಅಂಕಿಅಂಶಗಳ ಪ್ರಕಾರ, ಸಾಮಾನ್ಯ ಅಡುಗೆ ಎಣ್ಣೆಯಾದ ಸಾಸಿವೆ ಎಣ್ಣೆಯ ಮಾಸಿಕ ಸರಾಸರಿ ಚಿಲ್ಲರೆ ಬೆಲೆ ಈ ವರ್ಷದ ಮೇ ತಿಂಗಳಲ್ಲಿ ಒಂದು ಕೆ.ಜಿ.ಗೆ 164.44 ರೂ. ಆಗಿದೆ. ಇದು ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ. ಇದು ಕಳೆದ ವರ್ಷದ ಮೇ ತಿಂಗಳಿಗಿಂದ ಶೇ.39 (118.25 ರೂ.) ಆಗಿದೆ. ಹತ್ತು ವರ್ಷಗಳ ಹಿಂದೆ 2010ರಲ್ಲಿ ಅಡುಗೆ ತೈಲಗಳ ಸರಾಸರಿ ಬೆಲೆ ಕೆ.ಜಿ.ಗೆ 63.05 ರೂ. ಆಗಿದೆ. ಅಂದರೆ ಎರಡೂವರೆ ಪಟ್ಟು ಏರಿಕೆಯಾಗಿದೆ.

- Advertisement -

ಭಾರತದ ಅಡುಗೆ ಮನೆಗಳಲ್ಲಿ ವ್ಯಾಪಕವಾಗಿ ಬಳಕೆಯಾಗುವ ತಾಳೆ ಎಣ್ಣೆ (ಪಾಮ್‌ ಆಯಿಲ್)‌ ಬೆಲೆ ಗರಿಷ್ಟ ಮಟ್ಟಕ್ಕೆ ಏರಿಕೆಯಾಗಿದೆ. ಪಾಮ್‌ ಆಯಿಲ್‌ ಮಾಸಿಕ ಸರಾಸರಿ ಚಿಲ್ಲರೆ ಬೆಲೆ ಈ ವರ್ಷದ ಮೇ ತಿಂಗಳಿಗೆ ಪ್ರತಿ ಕೆ.ಜಿ.ಗೆ 131.69 ರೂ.ಯಷ್ಟಾಗಿದೆ. ಇದು ಕಳೆದ 11 ವರ್ಷಗಳಲ್ಲಿ ಅತಿ ಹೆಚ್ಚು ಮತ್ತು ಕಳೆದ ವರ್ಷ ಇದೇ ತಿಂಗಳಿಗೆ ಹೋಲಿಸಿದರೆ, ಶೇ.49ರಷ್ಟು ಏರಿಕೆಯಾಗಿದೆ. 11 ವರ್ಷಗಳ ಹಿಂದೆ 2010ರ ಏಪ್ರಿಲ್‌ ನಲ್ಲಿ ತಾಳೆ ಎಣ್ಣೆ ಕೆ.ಜಿ.ಗೆ 49.13 ರೂ. ಆಗಿತ್ತು. ಅಂದರೆ ಈಗ ಡಬ್ಬಲ್‌ ಆಗಿದೆ.

ನಾಲ್ಕು ಇತರ ಖಾದ್ಯ ತೈಲಗಳ ಮಾಸಿಕ ಸರಾಸರಿ ಚಿಲ್ಲರೆಗಳ ಬೆಲೆಗಳು – ನೆಲಗಡಲೆ ಪ್ರತಿ ಕೆ.ಜಿ.ಗೆ 175.55 ರೂ., ವನಸ್ಪತಿ ಕೆ.ಜಿ.ಗೆ 128.7 ರೂ. ಸೋಯಾ ಕೆ.ಜಿ.ಗೆ 148.27 ರೂ. ಮತ್ತು ಸೂರ್ಯಕಾಂತಿಗೆ ಕೆ.ಜಿ.ಗೆ 169.54 ರೂ. ಆಗಿದೆ.

ಈಗಾಗಲೇ ಲಾಕ್‌ ಡೌನ್‌ ಪರಿಣಾಮದಿಂದ ಉದ್ಯೋಗ ಕಳೆದುಕೊಂಡು ಮನೆಯಲ್ಲಿ ಸಂಕಷ್ಟದಲ್ಲಿರುವ ನಾಗರಿಕನಿಗೆ ಅಡುಗೆ ತೈಲ ಬೆಲೆಯೂ ಏರಿಕೆಯಾಗಿರುವುದು ಇನ್ನಷ್ಟು ಕಷ್ಟವನ್ನು ತಂದೊಡ್ಡಿದೆ.



Join Whatsapp