ತಿರುವನಂತಪುರಂ : ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದ ಆಡಳಿತಾಧಿಕಾರಿ, ಮಾಜಿ ಬಿಜೆಪಿ ನಾಯಕ ಪ್ರಫುಲ್ ಖೋಡಾ ಪಟೇಲ್ ಆಡಳಿತ ಕ್ರಮಕ್ಕೆ ಆಕ್ರೋಶ ಹೆಚ್ಚುತ್ತಿರುವ ನಡುವೆ ಅಲ್ಲಿನ ಬಿಜೆಪಿಯ ಕನಿಷ್ಠ ಎಂಟು ಮಂದಿ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕೇಂದ್ರಾಡಳಿತ ಪ್ರದೇಶದ ಸಂಸ್ಕೃತಿ ಮತ್ತು ಶಾಂತಿಯನ್ನು ಹಾಳುಗೆಡವುವ ಭೀತಿ ಸೃಷ್ಟಿಯಾಗಿರುವುದರಿಂದ ಪಟೇಲ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಅವರ ಹೊಸ ಆಡಳಿತ ನೀತಿಗಳಿಗೆ ಆಕ್ಷೇಪ ವ್ಯಕ್ತವಾಗುತ್ತಿದೆ.
ಆಡಳಿತದ ಜನ ವಿರೋಧಿ ಚಟುವಟಿಕೆಗಳನ್ನು ಬಹಿರಂಗಪಡಿಸಲು ಸ್ಥಳೀಯ ಘಟಕ ನಡೆಸಿದ ಪ್ರಯತ್ನಕ್ಕೆ ಕೇಂದ್ರ ಸರಕಾರದಿಂದ ಯಾವುದೇ ಉತ್ತರ ಪಡೆಯದ ಕಾರಣ ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಮಾಜಿ ರಾಜ್ಯ ಉಪಾಧ್ಯಕ್ಷ ಎಂ.ಸಿ. ಮುತ್ತುಕೋಯಾ, ಖಜಾಂಚಿ ಬಿ. ಶುಕೂರ್ ಹಾಗೂ ಬಿಜೆವೈಎಂ ಮಾಜಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಶಿಂ ಅವರು ರಾಜೀನಾಮೆ ನೀಡಿರುವ ಪ್ರಮುಖರಲ್ಲಿ ಸೇರಿದ್ದಾರೆ.