ಠಾಣೆಯಲ್ಲಿ ದಲಿತ ಯುವಕನಿಗೆ ಮೂತ್ರ ಕುಡಿಸಿದ ಕೇಸ್‌ : ಪಿಎಸ್‌ ಐ ಅರ್ಜುನ್‌ ಅಮಾನತು

Prasthutha|

ಚಿಕ್ಕಮಗಳೂರು : ಗೋಣಿಬೀಡು ಪೊಲೀಸ್‌ ಠಾಣೆಯಲ್ಲಿ ವಿಚಾರಣೆಯ ನೆಪದಲ್ಲಿ ದಲಿತ ಯುವಕನೊಬ್ಬನಿಗೆ ಅಮಾನವೀಯ ಹಿಂಸೆ ನೀಡಿದುದಲ್ಲದೆ, ಮೂತ್ರ ಕುಡಿಸಿದ ಆರೋಪ ಎದುರಿಸುತ್ತಿರುವ ಪಿಎಸ್‌ ಐ ಅರ್ಜುನ್‌ ಅವರನ್ನು ಪ್ರಕರಣಕ್ಕೆ ಸಂಬಂಧಿಸಿ ಅಮಾನತುಗೊಳಿಸಲಾಗಿದೆ. ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ಎಸ್ಪಿ ಅಕ್ಷಯ್‌ ಎಂ.ಎಚ್.‌ ತಿಳಿಸಿದ್ದಾರೆ.

- Advertisement -

ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮದ ದಲಿತ ಯುವಕನನ್ನು ಪ್ರಕರಣವೊಂದರಲ್ಲಿ ಠಾಣೆಗೆ ಕರೆಸಿಕೊಂಡಿದ್ದ ಪಿಎಸ್‌ ಐ ಯುವಕನಿಗೆ ಅಮಾನವೀಯ ಹಿಂಸೆ ನೀಡಿದ್ದಾರೆ. ಅಲ್ಲದೆ ಠಾಣೆಯಲ್ಲಿದ್ದ ಕಳ್ಳತನದ ಆರೋಪಿಯೊಬ್ಬನ ಮೂತ್ರವನ್ನು ಕುಡಿಸಿದ್ದ ಮತ್ತು ಜಾತಿ ನಿಂದನೆ ಮಾಡಿದ್ದ ಬಗ್ಗೆ ಯುವಕ ಆರೋಪಿಸಿದ್ದ.

ಪ್ರಕರಣಕ್ಕೆ ಸಂಬಂಧಿಸಿ ದಲಿತ ಯುವಕ ಪುನೀತ್‌ ಗಂಭೀರ ಆರೋಪಗಳನ್ನು ಮಾಡಿದ ಬಗ್ಗೆ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದ ಬೆನ್ನಲ್ಲೇ ʼಪ್ರಸ್ತುತʼ ಸಹಿತ ಕೆಲವು ವೆಬ್ ವಾಹಿನಿಗಳು ವರದಿ ಮಾಡುತ್ತಿದ್ದಂತೆ ರಾಜ್ಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಆಡಳಿತವು ಕ್ಷಿಪ್ರವಾಗಿ ಪ್ರತಿಕ್ರಿಯಿಸುವಂತಾಗಿತ್ತು.

- Advertisement -

ಯುವಕನ ದೂರಿನ ಹಿನ್ನೆಲೆಯಲ್ಲಿ ಪಿಎಸ್‌ ಐ ಅರ್ಜುನ್‌ ಅವರನ್ನು ಗೋಣಿಬೀಡು ಠಾಣೆಯಿಂದ ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು. ತರೀಕೆರೆ ಡಿವೈಎಸ್‌ ಪಿ ಅವರಿಂದ ಇಲಾಖಾ ತನಿಖೆ ಕೈಗೊಳ್ಳಲಾಗಿತ್ತು. ಈ ಮಧ್ಯೆ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ, ಐಜಿ ಅವರು ಪಿಎಸ್‌ ಐ ಅರ್ಜುನ್‌ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಆರೋಪಿ ಪಿಎಸ್‌ ಐ ಅವರನ್ನು ಉಡುಪಿ ಜಿಲ್ಲೆಗೆ ವರ್ಗಾಯಿಸಲಾಗಿದೆ. ಪ್ರಕರಣದ ಇಲಾಖಾ ತನಿಖೆಯನ್ನು ದಕ್ಷಿಣ ಕನ್ನಡ ಪುತ್ತೂರು ಡಿವೈಎಸ್‌ ಪಿ ಅವರಿಗೆ ಐಜಿ ಆದೇಶಿಸಿದ್ದಾರೆ ಎಸ್ಪಿ ಅಕ್ಷಯ್‌ ಕುಮಾರ್‌ ತಿಳಿಸಿದ್ದಾರೆ.  



Join Whatsapp