ಕೊರೊನದಲ್ಲಿ ಸತ್ತ ತಂದೆಯ ಅಂತ್ಯ ಸಂಸ್ಕಾರಕ್ಕೆ ಬರೋದಿಲ್ಲ, ಅವರ 6 ಲಕ್ಷ ರೂ. ಕೊಟ್ಟುಬಿಡಿ ಎಂದ ಮಗ!

Prasthutha|

ಮೈಸೂರು : ಕೊರೊನ ಸಾವುಗಳಲ್ಲಿ ಅದೆಷ್ಟೋ ಅಮಾನವೀಯ ಘಟನೆಗಳನ್ನು ನಾವು ನೋಡುವಂತಾಗಿದೆ. ತನ್ನ ಸ್ವಂತ ತಂದೆಯೇ ಸತ್ತಿದ್ದರೂ ಅವರ ಅಂತ್ಯ ಸಂಸ್ಕಾರಕ್ಕೆ ಬರದ ಮಗನೊಬ್ಬ, ತಂದೆಯ ಹಣ ಮಾತ್ರ ತಂದುಕೊಡ ಬೇಕೆಂದು ತಾಕೀತು ಮಾಡಿದ ಘಟನೆ ಮೈಸೂರಿನಲ್ಲಿ ವರದಿಯಾಗಿದೆ.

- Advertisement -

ಮೈಸೂರಿನಲ್ಲಿ ವ್ಯಕ್ತಿಯೊಬ್ಬರು ಕೊರೊನದಿಂದ ಸಾವಿಗೀಡಾಗಿದ್ದರು. ಅವರ ಅಂತ್ಯ ಸಂಸ್ಕಾರಕ್ಕೆ ಯಾರೂ ಇಲ್ಲದಿದ್ದಾಗ ಸ್ಥಳೀಯ ಕಾರ್ಪೊರೇಟರ್‌ ಶ್ರೀಧರ್‌ ಎಂಬವರು ಅಂತ್ಯ ಸಂಸ್ಕಾರಕ್ಕೆ ಮುಂದಾಗುತ್ತಾರೆ. ಈ ವೇಳೆ ಅವರು ಮೃತರ ಮಗನ ಜೊತೆ ನಡೆಸಿರುವ ಫೋನ್‌ ಮಾತುಕತೆಯ ಆಡಿಯೊ ವೈರಲ್‌ ಆಗಿದೆ.

ತಂದೆಯ ಅಂತ್ಯ ಸಂಸ್ಕಾರಕ್ಕೆ ಕೊನೆಯದಾಗಿ ತಂದೆಯನ್ನು ನೋಡಲು ಬರುವಂತೆ ಕಾರ್ಪೊರೇಟರ್‌ ಫೋನ್‌ ನಲ್ಲಿ ವಿನಂತಿಸುತ್ತಾರೆ. ಆದರೆ ಮೃತರ ಮಗ ಮೃತದೇಹದ ಅಂತ್ಯ ಸಂಸ್ಕಾರ ನೀವೇ ಮಾಡಿ ಬಿಡಿ ಎನ್ನುತ್ತಾನೆ. ಅಂತ್ಯ ಸಂಸ್ಕಾರ ಮಾಡುತ್ತೇವೆ, ಆದರೆ ಅವರ ಬಳಿ ಆರು ಲಕ್ಷ ರೂ. ಎರಡ್ಮೂರು ಎಟಿಎಂಗಳಿವೆ, ಮನೆಯಲ್ಲಿ ವಸ್ತುಗಳಿವೆ ಅವುಗಳನ್ನು ಏನು ಮಾಡಲಿ ಎಂದು ಕಾರ್ಪೊರೇಟರ್‌ ಕೇಳಿದಾಗ, ಮಾತನಾಡಿದ ಮಗ ಹಣ  ತಂದುಕೊಡಿ, ವಸ್ತುಗಳನ್ನೂ ತಂದುಕೊಡಿ, ಮನೆಗೆ ಬೀಗ ಹಾಕಿ ಎಂದು ಸಲಹೆ ನೀಡುತ್ತಾನೆ. ಅದೇ ಹಣದಲ್ಲಿ ನೀವು ವಸ್ತುಗಳನ್ನು ತಂದುಕೊಡಲು ತಗಲುವ ಖರ್ಚನ್ನು ಕೊಡುತ್ತೇನೆ ಎಂದೂ ಹೇಳುತ್ತಾನೆ.

- Advertisement -

ಇದರಿಂದ ಸಿಟ್ಟಿಗೆದ್ದ ಕಾರ್ಪೊರೇಟರ್‌, ನೀವೆಂತಹ ಜನಾರೀ? ಸತ್ತಿರುವ ತಂದೆಯನ್ನು ನೋಡಲು ಬರುವುದಿಲ್ಲ ಅನ್ನುತ್ತೀರಿ, ತಂದೆಯನ್ನು ಅನಾಥ ಶವದಂತೆ ಅಂತ್ಯ ಸಂಸ್ಕಾರ ಮಾಡಲು ಹೇಳುತ್ತೀರಿ, ಆದರೆ ಹಣ ವಸ್ತು ಕೇಳುತ್ತೀರಿ. ನಿಮ್ಮದು ಇದೇ ಸಂಸ್ಕೃತಿಯಾ? ಎಂದು ತರಾಟೆಗೆ ತೆಗೆದುಕೊಳ್ಳುತ್ತಾರೆ.

ಮೃತರು ಹೋಟೆಲ್‌ ಒಂದರಲ್ಲಿ ಮ್ಯಾನೇಜರ್‌ ಆಗಿದ್ದವರು. ಮಗ ಕೂಡ ಒಳ್ಳೆಯ ಉದ್ಯೋಗದಲ್ಲಿದ್ದಾನೆ. ವಿದ್ಯಾವಂತರಾಗಿಯೂ ತಂದೆಯ ಅನಾರೋಗ್ಯದ ವೇಳೆಯೂ ಬರದೆ, ಅಂತ್ಯ ಸಂಸ್ಕಾರಕ್ಕೂ ಬರದೆ, ಅವರ ಹಣಕ್ಕಾಗಿ ಆಸೆಪಟ್ಟ ವ್ಯಕ್ತಿಯ ಬಗ್ಗೆ ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

Join Whatsapp