ದಲಿತ ಯುವಕನಿಗೆ ಠಾಣೆಯಲ್ಲೇ ಚಿತ್ರಹಿಂಸೆ ನೀಡಿ, ಮೂತ್ರ ಕುಡಿಸಿದ ಪಿಎಸ್‌ ಐ | ವ್ಯಾಪಕ ಆಕ್ರೋಶ

Prasthutha|

ಮೂಡಿಗೆರೆ : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದಲಿತ ಯುವಕನೊಬ್ಬನ ಮೇಲೆ ಗೋಣಿಬೀಡಿನ ಪಿಎಸ್‌ ಐ ಅರ್ಜುನ್‌ ಅಮಾನವೀಯ ಹಿಂಸೆ ನೀಡಿದುದಲ್ಲದೆ, ಇನ್ನೋರ್ವನ ಮೂತ್ರ ಕುಡಿಸಿ, ನೆಲಕ್ಕೆ ಸುರಿದಿದ್ದ ಮೂತ್ರವನ್ನು ನೆಕ್ಕಿಸಿದ ಘಟನೆಯೂ ವರದಿಯಾಗಿದೆ. ಈ ಬಗ್ಗೆ ʼಭೀಮ ವಿಜಯʼ ಪತ್ರಿಕೆ ವರದಿ ಮಾಡಿದೆ. ವಿಷಯಕ್ಕೆ ಸಂಬಂಧಿಸಿ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ಒದಗಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕೋವಿಡ್‌ ೧೯ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಬೀದಿಗಿಳಿದು ಹೋರಾಟಕ್ಕಿಳಿಯಲು ಅವಕಾಶವಿಲ್ಲದಿರುವುದರಿಂದ ರಾಜ್ಯಾದ್ಯಂತ ಕನ್ನಡಿಗರು ಘಟನೆಗೆ ಸಂಬಂಧಿಸಿ ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ಹೊರಹಾಕುತ್ತಿದ್ದಾರೆ.

- Advertisement -

ಆರೋಪಿ ಪಿಎಸ್‌ ಐ ಅರ್ಜುನ್‌ ಅನ್ನು ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಿ ಜನರ ಆಕ್ರೋಶ ತಣಿಸಲು ಯತ್ನಿಸಲಾಗಿದೆ. ಆದರೆ ಮಾನವೀಯ ಸಮಾಜವೇ ತಲೆತಗ್ಗಿಸುವಂತಹ ಕೃತ್ಯ ಎಸಗಿರುವ ಪಿಎಸ್‌ ಐ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ವ್ಯಾಪಕವಾಗಿ ಕೇಳಿಬರುತ್ತಿದೆ.

೨೨ ವರ್ಷದ ಪುನೀತ್‌ ಎಂಬ ಯುವಕ ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮದವನು. ಐಟಿಐ ಮುಗಿಸಿರುವ ಪುನೀತ್‌ ಹೊರಗುತ್ತಿಗೆಯಲ್ಲಿ ಉದ್ಯೋಗವೊಂದರಲ್ಲಿದ್ದ. ಆರು ತಿಂಗಳ ಹಿಂದೆ ಗ್ರಾಮದ ಮಹಿಳೆಯೊಬ್ಬರಿಗೆ ಫೋನ್‌ ಕರೆ ಮಾಡಿದ್ದ ಎಂಬ ಆರೋಪದ ಹಿನ್ನೆಲೆಯಲ್ಲಿ ಆತನಿಗೆ ಬುದ್ಧಿ ಮಾತು ಹೇಳಿ ಕಳುಹಿಸಲಾಗಿತ್ತು.

- Advertisement -

ಆದರೆ ಈಗ ಆ ಮಹಿಳೆ ನೆರೆ ಮನೆಯಾತನೊಂದಿಗೆ ಪರಾರಿಯಾಗಿದ್ದು, ಇದರಲ್ಲಿ ಪುನೀತನ ಕೈವಾಡವಿದೆ ಎಂಬ ಶಂಕೆಯಿಂದ ಕೆಲವರು ಆತನ ಮನೆ ಮುಂದೆ ಜಮಾಯಿಸಿ ಗಲಾಟೆ ಮಾಡಿದ್ದಾರೆ. ಆದರೆ, ವಿಷಯದ ಅರಿವೇ ಇರದ ಪುನೀತ್‌ ಎಷ್ಟು ಕೇಳಿಕೊಂಡರೂ, ಬಂದಿದ್ದವರು ಗಲಾಟೆ ಜೋರಾಗಿ ಮಾಡುತ್ತಿದ್ದರು. ಹೀಗಾಗಿ ತಮಗೆ ರಕ್ಷಣೆ ನೀಡುವಂತೆ ಪೊಲೀಸರನ್ನು ೧೧೨ಗೆ ಕರೆ ಮಾಡಿ ಆತ ಕರೆಸಿದ್ದ. ಆದರೆ, ಈತನ ವಿರುದ್ದ ಯಾವುದೇ ದೂರು ದಾಖಲಾಗಿಲ್ಲವಾದರೂ, ಪಿಎಸ್‌ ಐ ಮತ್ತು ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪುನೀತನನ್ನೇ ಗಾಡಿ ಹತ್ತಿಸಿ ಠಾಣೆಗೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.
ಠಾಣೆಯಲ್ಲಿ ಪುನೀತನ ಬಟ್ಟೆ ಬಿಚ್ಚಿಸಿ, ಕಾಲು ಕಟ್ಟಿ ಹಾಕಿ, ನೇತು ಹಾಕಿ ಹೊಡೆದಿದ್ದಾರೆ. ಸುಮಾರು ೨ ಗಂಟೆ ಅಮಾನವೀಯ ಹಿಂಸೆ ನೀಡಿದ್ದಾರೆ. ಕೊನೆಗೆ ಪುನೀತ ಬಾಯಾರಿಕೆಯಾಗುತ್ತಿದೆ ಎಂದಾಗ ಕಳ್ಳತನ ಆರೋಪದಲ್ಲಿ ಬಂಧಿತನಾಗಿದ್ದ ಚೇತನ್‌ ಎಂಬಾತನಿಂದ ಉಚ್ಚೆ ಕುಡಿಸುವಂತೆ ಅಧಿಕಾರಿಯು ಸೂಚಿಸಿದ್ದಾನೆ. ಮೊದಲು ಹಿಂದೇಟು ಹಾಕಿದರೂ, ಅಧಿಕಾರಿಯ ಬೆದರಿಕೆಗೆ ಹೆದರಿ ಆತ ಕೊನೆಗೆ ಪುನೀತನ ಬಾಯಿಗೆ ಉಚ್ಚೆ ಉಯ್ದಿದ್ದಾನೆ. ಅಲ್ಲದೆ, ನೆಲಕ್ಕೆ ಬಿದ್ದಿದ್ದ ಉಚ್ಚೆ ನೆಕ್ಕುವಂತೆಯೂ ಮಾಡಲಾಗಿತ್ತು ಎಂದು ವರದಿಯಾಗಿದೆ.

ಮೂತ್ರ ಕುಡಿಸಿದ ಚೇತನ್ ನಾಪತ್ತೆಯಾಗಿದ್ದಾನೆ. ಆತನನ್ನು ಎಲ್ಲೋಬಚ್ಚಿಡಲಾಗಿದೆ ಎಂದು ಆರೋಪಿಸಲಾಗಿದೆ. ತನಿಖೆಯನ್ನು ಡಿವೈಎಸ್‌ ಪಿ ಕೈಗೆತ್ತಿಕೊಂಡಿದ್ದಾರೆ. ಪೊಲೀಸರು ಪುನೀತನಿಗೆ ೨ ಲಕ್ಷ ರೂ. ಹಣಕೊಟ್ಟು ಪ್ರಕರಣ ರಾಜೀ ಮಾಡಿಕೊಳ್ಳಲು ಮುಂದಾಗಿದ್ದರು ಎನ್ನಲಾಗಿದೆ. ಆದರೆ, ಅದಕ್ಕೆ ಒಪ್ಪದ ಪುನೀತ್‌ ಇಂತಹ ಅನ್ಯಾಯ ಇನ್ಯಾರಿಗೂ ಆಗಬಾರದು ಎಂದು ತಾನು ರಾಜಿಗೆ ಮುಂದಾಗಲಿಲ್ಲ ಎಂದು ವರದಿಯಾಗಿದೆ.

ಇದೀಗ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಒತ್ತಡ ಕೇಳಿಬಂದಿದೆ.



Join Whatsapp