ನಾನು ಯಾವುದೇ ಆಸ್ಪತ್ರೆಗೆ ಸೇರಲು ಬಯಸುವುದಿಲ್ಲ ; ಜೈಲಿನಲ್ಲೇ ಸಾಯುತ್ತೇನೆ : ಭೀಮಾ ಕೋರೆಗಾಂವ್ ಬಂಧಿತ ಸ್ಟ್ಯಾನ್ ಸ್ವಾಮಿ

Prasthutha|

ನಾನು ಯಾವುದೇ ಆಸ್ಪತ್ರೆಗೆ ದಾಖಲಾಗಲು ಇಚ್ಛಿಸುವುದಿಲ್ಲ ಎಂದಿರುವ ಭೀಮಾ ಕೋರೆಗಾಂವ್‌ ಪ್ರಕರಣದ ಆರೋಪಿ ಎಂಬತ್ನಾಲ್ಕು ವರ್ಷದ ಪಾದ್ರಿ ಸ್ಟ್ಯಾನ್‌ ಸ್ವಾಮಿ ತಮ್ಮನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಕೋರಿದ್ದಾರೆ. ಯಾವುದೇ ಆಸ್ಪತ್ರೆಗೆ ಸೇರಲು ನಾನು ಬಯಸುವುದಿಲ್ಲ, ಬದಲಿಗೆ ಜೈಲಿನಲ್ಲೇ ಸಾಯುತ್ತೇನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

- Advertisement -

ವೀಡಿಯೊ ಕಾನ್ಫರೆನ್ಸ್‌ ಮೂಲಕ ಸ್ವಾಮಿ ಅವರನ್ನು ಹಾಜರುಪಡಿಸುವಂತೆ ನ್ಯಾಯಾಲಯ ತಲೋಜ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ಬುಧವಾರ ಸೂಚಿಸಿತ್ತು. ಸ್ವಾಮಿ ಅವರು ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾದಾಗ, ನ್ಯಾಯಮೂರ್ತಿಗಳಾದ ಎಸ್ ಜೆ ಕಥಾವಲ್ಲಾ ಮತ್ತು ಎಸ್.ಪಿ.ತಾವಡೆ ಅವರಿದ್ದ ಪೀಠ ಜೈಲಿನಲ್ಲಿ ಸ್ವಾಮಿ ಅವರ ಆರೋಗ್ಯ ಮತ್ತು ಬದುಕಿನ ಸ್ಥಿತಿ ಬಗ್ಗೆ ವಿಚಾರಿಸಿದರು. ಆರೋಗ್ಯ ಸುಧಾರಿಸುವವರೆಗೆ ಕೆಲ ದಿನಗಳ ಕಾಲ ಜೆ ಜೆ ಆಸ್ಪತ್ರೆಗೆ ದಾಖಲಾಗಲು ಸಿದ್ಧರಿದ್ದೀರಾ ಎಂದು ಕಥಾವಲ್ಲಾ ಪ್ರಶ್ನಿಸಿದರು. ಆಗ ಸ್ವಾಮಿ ಅವರು ಆಸ್ಪತ್ರೆಗೆ ಎರಡು ಬಾರಿ ದಾಖಲಾಗಿದ್ದ ಮಾಹಿತಿ ನೀಡಿದರು. “ನಾನು ಜೆ ಜೆ ಆಸ್ಪತ್ರೆಗೆ ದಾಖಲಾಗುವುದಿಲ್ಲ. ಅದರಿಂದ ಆರೋಗ್ಯ ಸುಧಾರಿಸದೆ ಪರಿಸ್ಥಿತಿ ಹೀಗೆಯೇ ಇರುತ್ತದೆ. ಈಗ ಇರುವಂತೆಯೇ ಇದ್ದರೆ ಇನ್ನು ಕೆಲ ದಿನಗಳಲ್ಲಿ ನಾನು ಸಾಯುತ್ತೇನೆ” ಎಂದು ಸ್ವಾಮಿ ಹೇಳಿದರು.

ಆಸ್ಪತ್ರೆಯ ಸ್ಥಿತಿಗತಿಯಿಂದಾಗಿ ಸ್ವಾಮಿ ಅವರು ಅಲ್ಲಿಗೆ ದಾಖಲಾಗಲು ಬಯಸದೇ ಇರಬಹುದು ಎಂದು ಸ್ವಾಮಿ ಅವರ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಮಿಹಿರ್‌ ದೇಸಾಯಿ ತಿಳಿಸಿದರು. ಬೇರೆ ಆಸ್ಪತ್ರೆಗೆ ದಾಖಲಾಗಲು ಬಯಸುತ್ತೀರಾ ಎಂದು ಪೀಠ ಕೇಳಿದಾಗಲೂ ಸ್ವಾಮಿ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಜೂನ್ 7ಕ್ಕೆ ಮುಂದೂಡಿದೆ.



Join Whatsapp