ಸಾವಿನ ಸಂಖ್ಯೆಗೂ ಸರ್ಕಾರ ನೀಡಿರುವ ಲೆಕ್ಕಕ್ಕೂ ಭಾರೀ ವ್ಯತ್ಯಾಸವಿದೆ : ಈಶ್ವರ ಖಂಡ್ರೆ

Prasthutha|

ಬೀದರ್ : ಕೊರೋನಾ ಸೋಂಕಿನಿಂದ ಸಾವಿರಾರು ಮಂದಿ ರಾಜ್ಯದಲ್ಲಿ ಸಾವನ್ನಪ್ಪುತ್ತಿದ್ದು, ರಾಜ್ಯ ಸರ್ಕಾರ ಕೆಲವೇ ನೂರು ಜನರ ಲೆಕ್ಕ ನೀಡಿ ರಾಜ್ಯದ ಜನರನ್ನು ವಂಚಿಸುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಬೀದರ್ ನ ಕೋವಿಡ್ ಆಸ್ಪತ್ರೆ ಬ್ರಿಮ್ಸ್ ಒಂದರಲ್ಲಿಯೇ ಏ. 15ರಿಂದ ಮೇ 15 ನಡುವೆ 557 ಸೋಂಕಿತರು ಮೃತಪಟ್ಟಿದ್ದು, ಸರ್ಕಾರ ಇಡೀ ಜಿಲ್ಲೆಯಲ್ಲಿ 141 ಜನರು ಇದೇ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳುತ್ತಿದೆ. ಇದು ಹಸಿ ಸುಳ್ಳಲ್ಲದೆ ಮತ್ತೇನು ಎಂದು ಪ್ರಶ್ನಿಸಿದ್ದಾರೆ.

ಕೇವಲ ಒಂದು ಜಿಲ್ಲೆಯಲ್ಲಿ ಸಾವಿನ ಸಂಖ್ಯೆಯನ್ನು ಇಷ್ಟು ಮರೆ ಮಾಚುವುದಾದರೆ, ರಾಜ್ಯದಲ್ಲಿ ನಿಜವಾಗಿಯೂ ಕೋವಿಡ್ ನಿಂದ ಮೃತಪಟ್ಟಿರುವವರ ಸಂಖ್ಯೆ ಎಷ್ಟು? ಕಳೆದ ಒಂದು ತಿಂಗಳಲ್ಲಿ ರಾಜ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿರುವ ಅನುಮಾನ ಇದೆ. ಸರ್ಕಾರ ಜನರ ಕಣ್ಣಿಗೆ ಮಣ್ಣೆರಚುತ್ತಿದೆ ಎಂದು ಆರೋಪಿಸಿರುವ ಖಂಡ್ರೆ, ಈ ಬಗ್ಗೆ ಪ್ರಶ್ನಿಸಿದರೆ ಮೃತರ ಸಂಖ್ಯೆ ನೀಡಿದಾಗ ಆರ್‌ಟಿಪಿಸಿಆರ್ ವರದಿ ಬಂದಿರಲಿಲ್ಲ ಹೀಗಾಗಿ ಸೇರಿಸಿರಲಿಲ್ಲ ಎಂಬ ಉತ್ತರ ನೀಡುತ್ತಾರೆ. ಸಚಿವರುಗಳು ಕಾಂಗ್ರೆಸ್ ಪಕ್ಷ ದೂಷಿಸುವುದನ್ನು ಬಿಟ್ಟು, ಸತ್ಯಾಂಶವನ್ನು ಜನರ ಮುಂದಿಡಲಿ ಎಂದು ಸವಾಲು ಹಾಕಿದ್ದಾರೆ.



Join Whatsapp