►ಲಾಕ್ಡೌನ್ ವಿಸ್ತರಣೆ ಬಗ್ಗೆ ಚರ್ಚಿಸದ ಸರಕಾರ!
ಬೆಂಗಳೂರು: ಕೋವಿಡ್ ಎರಡನೇ ಅಲೆಯ ಲಾಕ್ಡೌನ್ ನಿಂದ ತತ್ತರಿಸಿ ಹೋಗಿರುವ ವಿವಿಧ ವಲಯಗಳ ಕಾರ್ಮಿಕರ ಪುನಶ್ಚೇತನಕ್ಕಾಗಿ ರಾಜ್ಯ ಸರಕಾರ 1250 ಕೋಟಿ ರೂ. ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಇಂದು ಹಿರಿಯ ಸಚಿವರ ಜೊತೆಗಿನ ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶೇಷ ಆರ್ಥಿಕ ಪ್ಯಾಕೇಜ್ ಪ್ರಕಟಿಸಿದರು.
ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಹಾನಿಗೆ 10 ಸಾವಿರ, ಹಣ್ಣು ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 10 ಸಾವಿರ ರೂ., ಆಟೋ ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ತಲಾ 3ಸಾವಿರ ಸಹಾಯಧನ ಹಾಗೂ ಕಟ್ಟಡ ಕಾರ್ಮಿಕರಿಗೆ ತಲಾ 3ಸಾವಿರ ರೂ., ಅಸಂಘಟಿತ ಕಾರ್ಮಿಕರಿಗೆ ಹಾಗೂ ಬೀದಿಬದಿ ವ್ಯಾಪಾರಸ್ಥರಿಗೆ ತಲಾ 2 ಸಾವಿರ ರೂ., ಕಲಾವಿದರು ಹಾಗೂ ಕಲಾ ತಂಡಗಳಿಗೆ ತಲಾ 3ಸಾವಿರದಂತೆ ಸಹಾಯಧನ ಘೋಷಿಸಲಾಗಿದೆ. ಇನ್ನು ಸ್ವಸಹಾಯ ಸಂಘ, ಕೃಷಿ ಪತ್ತಿನ ಸಾಲ ಮರುಪಾವತಿಗೆ ಜುಲೈ ಅಂತ್ಯದವರೆಗೂ ವಿಸ್ತರಿಸಿ ಆದೇಶಿಸಿರುವ ಸರಕಾರ, ಸಾಲದ ಮೇಲಿನ ಬಡ್ಡಿ ಭರಿಸುವ ಘೋಷಣೆ ಮಾಡಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಮೇ, ಜೂನ್ ತಿಂಗಳಿಗೆ ಉಚಿತ 5 ಕೆಜಿ ಅಕ್ಕಿ ವಿತರಣೆ, ಎಪಿಲ್ ಕಾರ್ಡ್ ದಾರರಿಗೆ ಪ್ರತಿ ಕೆಜಿಗೆ 15 ರೂ. ನಂತೆ 5 ಕೆಜಿ ಅಕ್ಕಿ, ಪಡಿತರ ಚಿಟಿ ಅರ್ಜಿ ಸಲ್ಲಿಸಿ ಸಿಗದೇ ಇದ್ದವರಿಗೂ ಮೇ, ಜೂನ್ ತಿಂಗಳ ಸೌಲಭ್ಯ ಪಡೆಯಲು ಅರ್ಹರು ಎಂದು ಸಿಎಂ ತಿಳಿಸಿದ್ದಾರೆ.
ಇನ್ನು ಬಿಬಿಎಂಪಿ, ನಗರ ವ್ಯಾಪ್ತಿಯಲ್ಲಿ ಹಸಿವು ನೀಗಿಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ಒದಗಿಸಲಾಗುತ್ತಿದೆ. ಕೋವಿಡ್ ನಿಂದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರಿಗಾಗಿ ಸರಕಾರ 960 ಕೋ. ರೂ. ಖರ್ಚು ಮಾಡಿದೆ ಎಂದರು. ಅಲ್ಲದೇ, ಲೈನ್ ಮ್ಯಾನ್, ಸಿಲಿಂಡರ್ ಡೆಲಿವರಿ ಬಾಯ್ ಗಳನ್ನ ‘ಕೊರೊನಾ ವಾರಿಯರ್ಸ್’ ಎಂದು ಪರಿಗಣಿಸುವುದಾಗಿ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್, ಡಿಸಿಎಂ ಡಾ. ಅಶ್ವತ್ಥ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತಿತ್ತರರು ಉಪಸ್ಥಿತರಿದ್ದರು.
“ಹಣಕಾಸಿನ ಪರಿಸ್ಥಿತಿ ಸರಿಯಿಲ್ಲದೇ ಇದ್ರೂ, ನಾಡಿನ ಜನತೆ ಜೊತೆ ಇದ್ದೀವಿ ಅನ್ನೋದನ್ನ ಈ ವಿಶೇಷ ಆರ್ಥಿಕ ಪ್ಯಾಕೇಜ್ ಮೂಲಕ ತೋರಿಸಿದ್ದೀವಿ. ಈ ಎಲ್ಲಾ ಯೋಜನೆಗಳು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಫಲಾನುಭವಿಗಳ ಖಾತೆಗೆ ಹಣ ನೇರ ಜಮಾವಣೆ ಆಗಲಿದೆ” ಎಂದು ಬಿಎಸ್ವೈ ತಿಳಿಸಿದರು.
ಇದೇ ಸಂದರ್ಭ ಲಾಕ್ಡೌನ್ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಸಿಎಂ, ಮೇ 23 ರಂದು ಚರ್ಚಿಸಿ ಆ ಬಳಿಕವೇ ಲಾಕ್ಡೌನ್ ವಿಸ್ತರಣೆ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದರು. ಸರಕಾರದ ವಿಶೇಷ ಪ್ಯಾಕೇಜ್ ನಲ್ಲಿ ವಿದ್ಯುತ್ ಬಿಲ್, ನೀರು ಬಿಲ್ ಪಾವತಿಗೆ ಹೆಚ್ಚುವರಿ ಸಮಯ ನೀಡದಿರುವುದು ಗಮನಾರ್ಹ.