ಬೆಂಗಳೂರು: ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಿದರೆ ಮಾತ್ರ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರಬಹುದು. ಆದ್ದರಿಂದ ಎರಡು ವಾರ ಕಂಪ್ಲೀಟ್ ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಪ್ರತಿದಿನ 50 ಸಾವಿರ ಆಸುಪಾಸಿನಲ್ಲಿರುವುದರಿಂದ 2 ವಾರ ಕಂಪ್ಲೀಟ್ ಲಾಕ್ ಡೌನ್ ಮಾಡಿದರೆ ಮಾತ್ರ ಸೋಂಕಿತರ ಸಂಖ್ಯೆ ಕಡಿಮೆಯಾಗಬಹುದು. ಆಂಧ್ರಪ್ರದೇಶ, ದೆಹಲಿಯಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಿರುವುದರಿಂದ ಅಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಅದೇ ರೀತಿ ರಾಜ್ಯದಲ್ಲಿಯೂ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಬೇಕು ಎಂದು ಅವರು ಸರಕಾರಕ್ಕೆ ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇರುವುದರಿಂದ ಈ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು. ಜನ ಆಕ್ಸಿಜನ್ ಕೊರತೆಯಿಂದ ಸಾಯುತ್ತಿದ್ದಾರೆ. ಆಕ್ಸಿಜನ್ ಸಕಾಲದಲ್ಲಿ ಸಿಕ್ಕರೆ ಅನೇಕ ಜೀವಗಳು ಉಳಿಯುತ್ತದೆ. ಆಕ್ಸಿಜನ್ ಕೊರತೆಯಿಂದ ಆಸ್ಪತ್ರೆ ಕಾರಿಡರ್, ರಸ್ತೆ, ಆಂಬುಲೆನ್ಸ್, ಆಟೋದಲ್ಲಿ ಪ್ರಾಣ ಕಳೆದುಕೊಂಡರು ಎನ್ನುವ ಸುದ್ದಿಗಳು ಬರುತ್ತಿದೆ. ಇದನ್ನೆಲ್ಲಾ ತಪ್ಪಿಸುವ ಸಲುವಾಗಿ ಸರ್ಕಾರ ಕೆಲಸ ಮಾಡಬೇಕಿದೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಸರ್ಕಾರ ಹೆಚ್ಚುವರಿ ಆಕ್ಸಿಜನ್ ಕೊಡುತ್ತಿಲ್ಲ. ಕೊರೋನಾ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.