ಅಲಹಾಬಾದ್: ಆಕ್ಸಿಜನ್ ಕೊರತೆಯಿಂದ ಕೊರೋನಾ ಸೋಂಕಿತರು ಸಾಯುತ್ತಿರುವ ಘಟನೆಗಳು ಗಂಭೀರ ಅಪರಾಧವಾಗಿರುತ್ತದೆ. ಇದು ಆಕ್ಸಿಜನ್ ಪೂರೈಕೆಯನ್ನು ಸಮರ್ಪಕವಾಗಿ ನಿಭಾಯಿಸುವ ಜವಾಬ್ದಾರಿ ಹೊಂದಿರುವ ಅಧಿಕಾರಿಗಳು ನಡೆಸುವ ಹತ್ಯಾಕಾಂಡ ಎಂದು ಅಲಹಾಬಾದ್ ಹೈಕೋರ್ಟ್, ಉತ್ತರಪ್ರದೇಶ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಉತ್ತರ ಪ್ರದೇಶದ ಮೀರತ್ ಮತ್ತು ಲಖನೌ ಜಿಲ್ಲೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ಕೋವಿಡ್ ಸೋಂಕಿತರು ಸಾಯುತ್ತಿರುವುದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ವರ್ಮಾ ಮತ್ತು ಅಜಿತ್ ಕುಮಾರ್ ಅವರಿರುವ ಹೈಕೋರ್ಟಿನ ನ್ಯಾಯಪೀಠ ಈ ಘಟನೆಗಳ ಬಗ್ಗೆ ಸೂಕ್ತ ತನಿಖೆಗೆ ಆದೇಶಿಸಿದೆ.
‘ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆಯ ಕೊರತೆಯಿಂದ ಸೋಂಕಿತರು ಸಾವಿಗೀಡಾಗುತ್ತಿರುವ ಘಟನೆಗಳನ್ನು ನೋಡಲು ತುಂಬಾ ನೋವಾಗುತ್ತಿದೆ. ಇದು ಅಪರಾಧ ಕೃತ್ಯ, ಹತ್ಯಾಕಾಂಡಕ್ಕಿಂತ ಕಡಿಮೆಯೇನಲ್ಲ’ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.