ಚಾಮರಾಜನಗರ : ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿರುವ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಮಂದಿ ಸಾವನ್ನಪ್ಪಿರುವ ಘಟನೆಯಲ್ಲಿ ಮೃತರಾದ 20 ಮಂದಿಯ ಮೃತದೇಹಗಳನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸ್ವಯಂ ಸೇವಕರು ನೆರವೇರಿಸಿದ್ದಾರೆ.
ಐದು ಯುವಕರ ತಂಡಗಳನ್ನು ರಚಿಸಿಕೊಂಡು ಮದ್ಯಾಹ್ನದ ವೇಳೆಗೆ 20 ಮೃತದೇಹಗಳ ಅಂತ್ಯಕ್ರಿಯೆಯೆಯನ್ನು PFI ಸ್ವಯಂ ಸೇವಕರು ನೆರವೇರಿಸಿದ್ದಾರೆ. ನಿನ್ನೆ ಮಧ್ಯರಾತ್ರಿ ಆಸ್ಪತ್ರೆಯ ಅಧಿಕಾರಿಗಳು ಕರೆ ಮಾಡಿ, ಇಲ್ಲಿ ಹೆಚ್ಚಿನ ಸೋಂಕಿತರು ಮೃತಪಟ್ಟಿದ್ದು, ನಿಮ್ಮ ಸಂಘಟನೆಯ ಸ್ವಯಂಸೇವಕರ ಅಗತ್ಯವಿದೆ ಎಂದು ತಿಳಿಸಿದ್ದರು.
ಈ ಕುರಿತು ಮಾತನಾಡಿದ ಪಾಪ್ಯುಲರ್ ಫ್ರಂಟಿನ ಚಾಮರಾಜನಗರ ಜಿಲ್ಲಾಧ್ಯಕ್ಷ ಕಫೀಲ್ ಅಹ್ಮದ್, “ದೇಶದ ಇಂದಿನ ವಿಷಮ ಪರಿಸ್ಥಿತಿಯಲ್ಲಿ ಈ ರೀತಿಯ ಸೇವೆ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಇದನ್ನೇ ದೇಶ ಸೇವೆ ಎಂದು ಬಗೆದು ಅಂತ್ಯಸಂಸ್ಕಾರ ಸೇವೆ ಮಾಡುತ್ತಿದ್ದೇವೆ” ಎಂದು ಹೇಳಿದರು. “ಮೃತರಲ್ಲಿ ಹೆಚ್ಚಿನವರು ಯುವಕರೇ ಆಗಿದ್ದಾರೆ. ಅದನ್ನು ನೋಡುವಾಗ ಹೃದಯ ಭಾರವಾಗುತ್ತದೆ” ಎಂದು ಜಿಲ್ಲಾ ಕಾರ್ಯದರ್ಶಿ ಶೋಯಬ್ ಅವರು ತಿಳಿಸಿದರು.