ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವಿಕೆ ಕೈ ಮೀರಿದೆ. ಹೀಗಾಗಿ ಮೇ. 16 ರಿಂದ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಬೇಕಾ ? ಅಥವಾ ಮುಂದೂಡಬೇಕಾ? ಎಂಬುದರ ಬಗ್ಗೆ ಗೊಂದಲ ಏರ್ಪಟ್ಟಿದೆ. ನಿಗದಿತ ವೇಳಾಪಟ್ಟಿಯಂತೆ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸಿದ್ದರು. ಆದರೆ, ರಾಜ್ಯದಲ್ಲಿ ದಿನಕ್ಕೆ ವರದಿಯಾಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ 40 ಸಾವಿರ ಗಡಿ ದಾಟಿದೆ. ಹೀಗಾಗಿ ಪಿಯುಸಿ ಪರೀಕ್ಷೆ ಮುಂದೂಡುವ ಬಗ್ಗೆ ಇಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹಾಗೂ ಪದವಿ ಪೂರ್ವ ಶಿಕ್ಷಣ ನಿರ್ದೇಶನಾಲಯ ಅಧಿಕಾರಿಗಳ ಜತೆ ಸಭೆ ಕರೆದಿದ್ದಾರೆ.
ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿತ್ತು. ಈ ಮಧ್ಯೆ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿಯನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಕಟಿಸಿದ್ದರು. ಇದಾದ ಬಳಿಕ ಕೊರೊನಾ ಸೋಂಕು ಹರಡುವಿಕೆ ಕೈ ಮೀರಿದೆ. ಆಸ್ಪತ್ರೆಗಳಲ್ಲಿಆಕ್ಸಿಜನ್ ಮತ್ತು ಹಾಸಿಗೆ ಇಲ್ಲದೇ ಕೊರೊನಾ ಸೋಂಕಿತರು ಬೀದಿ ಹೆಣವಾಗುತ್ತಿದ್ದಾರೆ. ಇಂತಹ ಸಂಕಷ್ಟ ಸ್ಥಿತಿಯಲ್ಲಿ ಪದವಿ ಪೂರ್ವ ಶಿಕ್ಷಣ ನಿರ್ದೇಶನಾಲಯ ನಿಗದಿ ಮಾಡಿರುವಂತೆ ಮೇ. 16 ರಿಂದ ಪಿಯುಸಿ ಪರೀಕ್ಷೆ ನಡೆಸಲು ಅಸಾಧ್ಯ. ಹೀಗಾಗಿ ಅಧಿಕಾರಿಗಳ ಸಭೆ ಕರೆದು ಅನಿರ್ಧಿಷ್ಟ ಅವಧಿಗೆ ಮುಂದೂಡುವ ಬಗ್ಗೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ಕೊರೊನಾ ಸೋಂಕು ಈ ಮಟ್ಟದಲ್ಲಿ ಹರಡುತ್ತದೆ ಎಂದು ಭಾವಿಸಿರಲಿಲ್ಲ. ನಮ್ಮ ಇಲಾಖೆಯಲ್ಲಿ ಸಹೋದ್ಯೋಗಿಗಳೇ ಕೊವಿಡ್‌ಗೆ ಬಲಿಯಾದರು. ಎರಡು ದಿನದಲ್ಲಿ ಪರಿಚಿತ ಇಬ್ಬರು ಉಪನ್ಯಾಸಕರು ತೀರಿಕೊಂಡಿದ್ದಾರೆ. ಪರಿಸ್ಥಿತಿ ತೀರಾ ಸಂಧ್ದಿಗ್ನವಾಗಿದೆ. ಹೀಗಾಗಿ ಪಿಯುಸಿ ಪರೀಕ್ಷೆ ಮುಂದೂಡಿಕೆ ಬಗ್ಗೆ ಇಂದು ನಮ್ಮ ನಿರ್ದೇಶನಾಲಯದ ನಿರ್ದೇಶಕರ ನೇತೃತ್ವದಲ್ಲಿ ಸಭೆ ಕರೆದಿದ್ದಾರೆ. ಈಗಿನ ಸನ್ನಿವೇಶದಲ್ಲಿ ಪರೀಕ್ಷೆ ನಡೆಸುವುದು ಕಷ್ಟ. ಹೀಗಾಗಿ ಪರೀಕ್ಷೆಯನ್ನು ಮುಂದೂಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ” ಎಂದು ಪಿಯುಸಿ ಪರೀಕ್ಷಾ ವಿಭಾಗದ ಅಧಿಕಾರಿ ತಿಳಿಸಿದ್ದಾರೆ.