ಮಧ್ಯರಾತ್ರಿ ಗರ್ಭಿಣಿಯನ್ನು ಆಸ್ಪತ್ರೆ ಸೇರಿಸಲು ನೆರವಾದ ಪೊಲೀಸರಿಗೆ ಕಮಿಷನರ್ ಶಶಿಕುಮಾರ್ ರಿಂದ ಸನ್ಮಾನ!

Prasthutha|

ಮಧ್ಯರಾತ್ರಿ ಕಾರು ಅರ್ಧದಾರಿಯಲ್ಲಿ ಕೆಟ್ಟು ಹೋದ ವೇಳೆ ಗರ್ಭೀಣೀಯನ್ನು ಸಕಾಲದಲ್ಲಿ ತಮ್ಮ ಪೊಲೀಸ್ ವಾಹನದಲ್ಲೇ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಪೊಲೀಸ್ ಸಿಬ್ಬಂದಿಯನ್ನು ಮಂಗಳೂರು ನಗರ ಕಮಿಷನರ್ ಎನ್. ಶಶಿಕುಮಾರ್ ನೇತೃತ್ವದಲ್ಲಿ ಸನ್ಮಾನಿಸಲಾಯಿತು.‌ ಮಂಗಳೂರು ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಮಂಗಳೂರು ಗ್ರಾಮಾಂತರ ಠಾಣೆಯ ಸಿಬ್ಬಂದಿಯಾದ ಎಎಸ್‌ಐ ಹರೀಶ್ ಹಾಗೂ ಸಿಪಿಸಿ ವಿಜಯ್ ಕುಮಾರ್ ಕುಮಾರ್‌ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

- Advertisement -

ಬೆಳ್ತಂಗಡಿಯ ಗುರುವಾಯನೆಕೆರೆಯಿಂದ ಮಂಗಳೂರಿನ ಆಸ್ಪತ್ರೆಗೆ ಶುಕ್ರವಾರ ತಡರಾತ್ರಿ 1.15ರ ಸುಮಾರಿಗೆ ಸಿದ್ದೀಕ್‌ ಎಂಬುವವರು ತಮ್ಮ ಪತ್ನಿ ಶಾಹಿದಾ ಬಾನು ಅವರನ್ನು ಹೆರಿಗೆಗಾಗಿ ಆಸ್ಪತ್ರೆಗೆ ಕರೆ ತರುತ್ತಿದ್ದ ವೇಳೆ ಅರ್ಕುಳ ಎಂಬಲ್ಲಿ ಕಾರು ಕೆಟ್ಟು ಹೋಗಿತ್ತು. ರಾತ್ರಿ ಕರ್ಫ್ಯೂ ಇದ್ದ ಕಾರಣ ಬೇರೆ ಯಾರಿಂದಲೂ ಸಹಾಯ ಪಡೆಯುವ ಸ್ಥಿತಿಯಲ್ಲಿರಲಿಲ್ಲ. ಇದೇ ವೇಳೆ ನೈಟ್ ಬೀಟ್‌ನಲ್ಲಿದ್ದ ಈ ಇಬ್ಬರು ಪೊಲೀಸ್ ಗಸ್ತು ವಾಹನದ ಸಿಬ್ಬಂದಿ ಆತಂಕದಲ್ಲಿದ್ದ ಸಿದ್ದೀಕ್ ಕುಟುಂಬವನ್ನು ಗಮನಿಸಿ ತಕ್ಷಣ ನೆರವಿಗೆ ಮುಂದಾಗಿದ್ದಾರೆ. ತಮ್ಮ ಪಿಸಿಆರ್ ವಾಹನದಲ್ಲೇ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.ಬೆಳಗ್ಗಿನ ಜಾವ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಮನೆಯವರು ಮಾನವೀಯತೆಯ ಸಹಕಾರ ನೀಡಿದ ಪೊಲೀಸ್ ಸಿಬ್ಬಂದಿಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ.



Join Whatsapp